ಬೆಂಗಳೂರು: ಧರ್ಮಸ್ಥಳದ ಕಾಲೇಜು ವಿದ್ಯಾರ್ಥಿನಿ ಸೌಜನ್ಯಾ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಕೊಲೆ ಪ್ರಕರಣದ ಆರೋಪಿ ಸಂತೋಷ್ ರಾವ್ ನನ್ನು ದೋಷಮುಕ್ತಗೊಳಿಸಿ ಸಿಬಿಐ ವಿಶೇಷ ನ್ಯಾಯಾಲಯ ಶುಕ್ರವಾರ ಆದೇಶ ಹೊರಡಿಸಿದೆ.
ಉಜಿರೆಯ ಎಸ್.ಡಿ.ಎಂ. ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ಸೌಜನ್ಯಾ ಮೃತದೇಹ 2012ರ ಅ. 10ರಂದು ಮಣ್ಣಸಂಕ ಪ್ರದೇಶದ ಪೊದೆಯಲ್ಲಿ ಪತ್ತೆಯಾಗಿತ್ತು. ಆಕೆಯ ಮೇಲೆ ದೌರ್ಜನ್ಯ ನಡೆಸಿ ಕೊಲೆ ಮಾಡಿದ ಆರೋಪದ ಮೇಲೆ ಸಂತೋಷ್ ರಾವ್ ನನ್ನು ಪೊಲೀಸರು ಬಂಧಿಸಿದ್ದರು. ದೇಶಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದ್ದ ಈ ಪ್ರಕರಣದ ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಧೀಶರಾದ ಸಿ.ಬಿ. ಸಂತೋಷ್ ಅವರು, ಆರೋಪಿ ಕೃತ್ಯವೆಸಗಿರುವುದನ್ನು ರುಜುವಾತುಪಡಿಸುವ ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ 6ನಿರ್ದೋಷಿ ಎಂದು ಆದೇಶ ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸೌಜನ್ಯಾ ತಾಯಿ ಕುಸುಮಾವತಿ ಅವರು, ಸಿಬಿಐ ಮತ್ತೆ ತನಿಖೆ ನಡೆಸಿ ಆರೋಪಿಗಳು ಯಾರೆಂದು ಪತ್ತೆ ಹಚ್ಚಿ ನಮಗೆ ನ್ಯಾಯ ಕೊಡಿಸಲಿ. ಸಿಬಿಐ ತನಿಖೆಯಿಂದ ನಮಗೆ ನ್ಯಾಯ ಸಿಗುವ ಭರವಸೆ ಇದ್ದು, ಮುಂದೆಯೂ ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ.
ನಾವು ಮೊದಲಿನಿಂದಲೂ ಸಂತೋಷ್ ರಾವ್ ಆರೋಪಿ ಎಲ್ಲ ಎಂದು ಹೇಳುತ್ತಿದ್ದೇವೆ. 10 ವರ್ಷದಿಂದ ಆತ ಆರೋಪಿಯಲ್ಲ ಎಂದು ಹೇಳುತ್ತಿದ್ದೇವೆ. ನಿಜವಾದ ಆರೋಪಿಗಳು ಯಾರು ಎಂದು ಸಿಬಿಐ ತನಿಖೆಯಿಂದ ಗೊತ್ತಾಗುತ್ತದೆ. ಈ ನಿಟ್ಟಿನಲ್ಲಿ ತನಿಖೆ ನಡೆಯಲಿ. ನಾವು ಮೂರ್ನಾಲ್ಕು ಜನರ ಹೆಸರು ನೀಡಿದ್ದೆವು. ಅವರ ಬಗ್ಗೆ ತನಿಖೆ ಮಾಡಲಿ. ನಾವು ಹೆಸರು ಹೇಳಿರುವವರು ತಪ್ಪು ಮಾಡದಿದ್ದರೆ ಯಾಕೆ ತಡೆಯಾಜ್ಞೆ ತಂದಿದ್ದಾರೆ? ಸಿಬಿಐ ಅಧಿಕಾರಿಗಳು ನಾವು ಹೆಸರು ಹೇಳಿರುವವರ ಬಗ್ಗೆ ತನಿಖೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.