ಧಾರವಾಡ: ಧಾರವಾಡದ ಜಿಲ್ಲೆಯ ಗರಗ ಗ್ರಾಮದಲ್ಲಿ ಡಿಸೆಂಬರ್ 3 ರಂದು ಮಧ್ಯಾಹ್ನ ಮನೆಗೆ ನುಗ್ಗಿ ವ್ಯಕ್ತಿಯನ್ನು ಹತ್ಯೆಗೈದ ಆರೋಪಿಗಳನ್ನು ಕೃತ್ಯ ನಡೆದ 48 ಗಂಟೆಯೊಳಗೆ ಬಂಧಿಸಲಾಗಿದೆ.
ಗರಗ ಗ್ರಾಮದ ಹಳೇ ಪೊಲೀಸ್ ಠಾಣೆ ಹತ್ತಿರ ಇರುವ ಮನೆಗೆ ಆರೋಪಿತರು ಅಕ್ರಮ ಪ್ರವೇಶ ಮಾಡಿ. ಮನೆಯಲ್ಲಿದ್ದ ಗಿರೀಶ್(49) ಅವರನ್ನು ಹರಿತವಾದ ಆಯುಧದಿಂದ ಕೊಚ್ಚಿ ಕೊಲೆ ಮಾಡಿದ್ದರು. ಗಿರೀಶ್ ರಿಯಲ್ ಎಸ್ಟೇಟ್ ನಡೆಸುತ್ತಿದ್ದರು.
ಮೃತರ ಪತ್ನಿ, ಶಿಕ್ಷಕಿ ದೀಪಾ ಗರಗ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದರು. ಈ ಬಗ್ಗೆ ಸೂಕ್ತ ತನಿಖೆ ಮತ್ತು ಆರೋಪಿಗಳ ಪತ್ತೆಗಾಗಿ ಧಾರವಾಡ ಜಿಲ್ಲಾ ಎಸ್.ಪಿ ಡಾ. ಗೋಪಾಲ ಬ್ಯಾಕೋಡ ಅವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎನ್.ವಿ.ಬರಮನಿ ಹಾಗೂ ಎಸ್.ಎಂ.ನಾಗರಾಜ್ ಇವರ ಮೇಲುಸ್ತುವಾರಿಯಲ್ಲಿ ತನಿಖಾಧಿಕಾರಿಗಳಾದ ಸಿಪಿಐ ಸಮೀರ್ ಮುಲ್ಲಾ, ಸಿದ್ದರಾಮಪ್ಪ ಹುಣ್ಣದ, ಪಿಎಸ್ಐ ಕಾನ್‍ಸು, ಎಫ್.ಎಂ. ಮಂಟೂರ ಇವರ ನೇತೃತ್ವದಲ್ಲಿ ತಂಡ ರಚಿಸಿ ಕೂಡಲೇ ತನಿಖೆ ಪ್ರಾರಂಭಿಸಿ ಪ್ರಕರಣದಲ್ಲಿ ಒಟ್ಟು 4 ಜನ ಆರೋಪಿತರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.