ಧಾರವಾಡ: ಧಾರವಾಡ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಬಾಡ ಗ್ರಾಮದ ಬಳಿ ಮರಕ್ಕೆ ಕ್ರೂಸರ್ ಡಿಕ್ಕಿಯಾಗಿ 7 ಜನ ಸ್ಥಳದಲ್ಲೇ ಸಾವನ್ನಪ್ಪಿದ್ದು, ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಕ್ರೂಸರ್ ಚಾಲಕನ ಅಜಾಗರೂಕತೆಯಿಂದ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ.
ಧಾರವಾಡ ತಾಲೂಕಿನ ಬೆನಕಟ್ಟಿ ಗ್ರಾಮದ ಅನನ್ಯಾ(14), ಹರೀಶ್(13), ಶಿಲ್ಪಾ(34), ನೀಲವ್ವ(60), ಮಧುಶ್ರೀ(20) ಮಹೇಶ್ವರಯ್ಯ(11), ಶಂಭುಲಿಂಗಯ್ಯ(35) ಮೃತಪಟ್ಟವರು ಎಂದು ಹೇಳಲಾಗಿದೆ.
ಮನ್ಸೂರು ಗ್ರಾಮದಲ್ಲಿ ನಿಶ್ಚಿತಾರ್ಥ ಮುಗಿಸಿ ಬೆನಕಟ್ಟಿಗೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಪೊಲೀಸ್ ಅಧೀಕ್ಷಕ ಕೃಷ್ಣಕಾಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಧಾರವಾಡ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ರಾತ್ರಿ 1.30 ರಿಂದ 2 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ಧಾರವಾಡ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಕಾಂತ್ ಹೇಳಿದ್ದಾರೆ. ಬಾಡ ಗ್ರಾಮದ ಮಳೆ ಅಪಘಾತ ಸಂಭವಿಸಿದ್ದು, ಅಪಘಾತಕ್ಕೀಡಾದ ಕ್ರೂಸರ್ ನಲ್ಲಿ 13 ಜನ ಪ್ರಯಾಣಿಸುತ್ತಿದ್ದರು. ಇವರಲ್ಲಿ 7 ಜನರು ಮೃತಪಟ್ಟಿದ್ದಾರೆ. 6 ಜನರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಮದುವೆ ಹಿಂದಿನ ದಿನ ನಿಶ್ಚಿತಾರ್ಥ ಮುಗಿಸಿ ಮನ್ಸೂರು ಗ್ರಾಮದಿಂದ ಬೆನಕಟ್ಟಿ ಗ್ರಾಮಕ್ಕೆ ತೆರಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ವಾಹನ ಡಿಕ್ಕಿಯಾಗಿದೆ. ಘಟನೆಯ ಬಗ್ಗೆ ಕೇಸ್ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.