ಜನವರಿ 17 ರಂದು ನಟ ಧನುಷ್ ಮತ್ತು ಐಶ್ವರ್ಯ ರಜನಿಕಾಂತ್ ಅವರು ತಮ್ಮ ಬೇರ್ಪಡಿಕೆಯನ್ನು ಖಚಿತಪಡಿಸಿದ್ದಾರೆ. ಜಂಟಿ ಹೇಳಿಕೆಯೊಂದರಲ್ಲಿ, ಧನುಷ್ ಮತ್ತು ಐಶ್ವರ್ಯ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲು ನಿರ್ಧರಿಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಈ ಸುದ್ದಿಯಿಂದ ಧನುಷ್ ಹಾಗೂ ರಜನಿಕಾಂತ್ ಇಬ್ಬರ ಅಭಿಮಾನಿಗಳಿಗೆ ಆಶ್ಚರ್ಯ, ದುಃಖ ಉಂಟಾಗಿದೆ. ಇಂತಾ ಸಂದರ್ಭದಲ್ಲಿ ಗಂಡ ಮತ್ತು ತಂದೆಯನ್ನು ಹೊಗಳಿ ಬರೆದಿರುವ ಸೌಂದರ್ಯ ಅವರ ಹಳೆ ಪೋಸ್ಟ್ ಒಂದು ವೈರಲ್ ಆಗುತ್ತಿದೆ. ಮೂಲತಃ ಅಕ್ಟೋಬರ್ 2021 ರಲ್ಲಿ ಈ ಪೋಸ್ಟ್ ಹಂಚಿಕೊಳ್ಳಲಾಗಿದ್ದು, ರಾಷ್ಟ್ರ ಪ್ರಶಸ್ತಿ ಪಡೆದ ಸಂದರ್ಭದಲ್ಲಿ ರಜನಿಕಾಂತ್ ಹಾಗೂ ಧನುಷ್ ಒಟ್ಟಿಗೆ ಕ್ಲಿಕ್ಕಿಸಿಕೊಂಡಿರುವ ಫೋಟೊ ಇದಾಗಿದೆ.
ಅಕ್ಟೋಬರ್ 2021 ರಲ್ಲಿ, ರಜನಿಕಾಂತ್, ಧನುಷ್ ಮತ್ತು ಐಶ್ವರ್ಯ ನವದೆಹಲಿಯಲ್ಲಿ ನಡೆದ ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಲು ಒಟ್ಟಿಗೆ ಬಂದಿದ್ದರು. ರಜನಿಕಾಂತ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಯಿತು ಮತ್ತು ‘ಅಸುರನ್’ ಚಿತ್ರಕ್ಕಾಗಿ ಧನುಷ್ ಅತ್ಯುತ್ತಮ ನಟ ವಿಭಾಗದಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದರು. ಇಬ್ಬರನ್ನು ಅಭಿನಂದಿಸುತ್ತಾ, ಐಶ್ವರ್ಯ ಅವರು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಂಚಿಕೊಂಡಿದ್ದರು.
ತಂದೆ ಹಾಗೂ ಗಂಡನ ಫೋಟೊ ಪೋಸ್ಟ್ ಮಾಡಿದ್ದರು. ಈಗ ಅದೇ ಪೋಸ್ಟ್ ಗೆ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಕೆಲವು ತಿಂಗಳ ಹಿಂದೆ ಈ ಪೋಸ್ಟ್ ನೋಡಿದಾಗ ಖುಷಿಯಾಗುತ್ತಿತ್ತು, ಈಗ ಬೇಸರವಾಗುತ್ತಿದೆ. ನೀವಿಬ್ಬರು ಕಾಲಿವುಡ್ ನ ಕ್ಯೂಟ್ ಕಪಲ್ ಎಂದು ಬೇಸರದ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಧನುಷ್ ಮತ್ತು ಐಶ್ವರ್ಯ ರಜನೀಕಾಂತ್ 18 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ್ದು, ತಮ್ಮ ನಿರ್ಧಾರವನ್ನು ಗೌರವಿಸುವಂತೆ ಅಭಿಮಾನಿಗಳನ್ನ ವಿನಂತಿಸಿದ್ದಾರೆ.