ಹಾಸನ: ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ ದರ್ಶನಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ.
ನವೆಂಬರ್ 3ರಂದು ಹಾಸನಾಂಬೆ ಗರ್ಭಗುಡಿಯ ಬಾಗಿಲು ತೆರೆದಿದ್ದು, ನವೆಂಬರ್ 15ರ ಮುಂಜಾನೆವರೆಗೂ ದೇವಿಯ ದರ್ಶನಕ್ಕೆ ಅವಕಾಶವಿದೆ.
ನವೆಂಬರ್ 15ರಂದು ಗರ್ಭಗುಡಿ ಬಾಗಿಲು ಮುಚ್ಚಲಿದೆ. ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ಹಾಸನಾಂಬ ದೇವಿ ದರ್ಶನ ಪಡೆದುಕೊಳ್ಳಲು ರಾಜ್ಯದ ವಿವಿಧೆಡೆಯಿಂದ ಭಕ್ತರು ಆಗಮಿಸಿದ್ದಾರೆ. ಭಕ್ತರಿಗೆ ದೇವಿಯ ದರ್ಶನ ಪಡೆದುಕೊಳ್ಳಲು ಜಿಲ್ಲಾಡಳಿತ ಸಕಲ ವ್ಯವಸ್ಥೆ ಮಾಡಿದೆ.
ಕೃಷ್ಣಪ್ಪ ನಾಯಕನ ಕಾಲದಿಂದಲೂ ಆಶ್ವೀಜ ಮಾಸ ಪೌರ್ಣಮಿಯ ನಂತರ ಬರುವ ಗುರುವಾರದಂದು ಹಾಸನಾಂಬೆಯ ದೇವಾಲಯ ತೆರೆಯಲ್ಪಡುತ್ತದೆ. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತಾದಿಗಳು ಅಂದು ದರ್ಶನಾಕಾಂಕ್ಷಿಗಳಾಗಿ ಬಂದು ದೇವಿಯ ದರ್ಶನ ಪಡೆಯುತ್ತಾರೆ. ಗರ್ಭಗುಡಿಯಲ್ಲಿ ಹುತ್ತದೋಪಾದಿಯಲ್ಲಿರುವ ಆದಿಶಕ್ತಿಸ್ವರೂಪಿಣಿ ಹಾಸನಾಂಬೆಗೆ ಹಿಂದಿನ ವರುಷ ಹಚ್ಚಿಟ್ಟಿದ್ದ ದೀಪವು ಆರದೇ, ಮುಡಿಸಿದ ಹೂ ಬಾಡದೇ ಹಾಗೂ ನೈವೇದ್ಯಕ್ಕಿಟ್ಟ ಅಕ್ಕಿಯು ಅನ್ನವಾಗಿರುವ ವಿಸ್ಮಯ ದೃಶ್ಯವನ್ನು ಕಣ್ತುಂಬಿಕೊಳ್ತುವ ಭಕ್ತಾದಿಗಳಿಗೆ ಪುನೀತ ಭಾವವೇ ಹೌದು.
ಹೀಗೆ ವರ್ಷಕ್ಕೊಮ್ಮೆ ದೇಗುಲದ ಬಾಗಿಲ ಪುರ ಪ್ರಮುಖರಾದ ತಹಸಿಲ್ದಾರರು/ ಕಮೀಷನರ್ ಶಾಸಕರು ಮುಂತಾದವರ ಸಮ್ಮುಖದಲ್ಲಿ ತೆರೆಯಲಾಗುತ್ತದೆಯಲ್ಲದೇ, ಬಲಿಪಾಡ್ಯಮಿಯ ಮಾರನೇ ದಿನ ಬಾಗಿಲು ಅವರೆಲ್ಲರ ಸಮ್ಮುಖದಲ್ಲಿ ದೇವಿಗೆ ದೀಪ, ಅಕ್ಕಿ ನೈವಿದ್ಯಾದಿ ಅಲಂಕಾರಗಳು ಇರುವಂತೆಯೇ ಮುಚ್ಚಲಾಗುತ್ತದೆ.