ದೇವರನ್ನು ಸಂತೃಪ್ತಗೊಳಿಸಲು ಹಲವಾರು ಮಾರ್ಗಗಳನ್ನು ಭಕ್ತರು ಕಂಡುಕೊಳ್ಳುತ್ತಾರೆ. ಅಂಥದ್ದರಲ್ಲಿ ಒಂದು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ದೇವಸ್ಥಾನ.
ಇಲ್ಲಿಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಗಂಗಾವರಂ ಮಂಡಲದ ಬೀರಗನೈ ಕುರಪಳ್ಳಿ ಗ್ರಾಮದಲ್ಲಿ ನಿಡಿಗುಂಟ ಬೀರ ಲಿಂಗೇಶ್ವರ ಸ್ವಾಮಿ, ಶ್ರೀ ಉಜ್ಜನಿರಾಯ ಸ್ವಾಮಿ ಮತ್ತು ವ್ಯಾಸರಾಯ ಸ್ವಾಮಿಗಳನ್ನು ಆರಾಧಿಸುವ ಕುರವ ಜನಾಂಗದ ಜನರ ಪದ್ಧತಿಯೀಗ ಭಾರಿ ಸುದ್ದಿಯಾಗುತ್ತಿದೆ.
ಜನರು ದೇವರನ್ನು ಸಂತುಷ್ಟಗೊಳಿಸಲು ತಲೆಯ ಮೇಲೆ ತೆಂಗಿನಕಾಯಿಗಳನ್ನು ಒಡೆದುಕೊಳ್ಳುತ್ತಿದ್ದಾರೆ. ಈ ದೇವರು ತಮ್ಮ ಗ್ರಾಮದ ದೇವರು ಎಂದು ಪರಿಗಣಿಸಿರುವ ಗ್ರಾಮಸ್ಥರು ತಲೆಯ ಮೇಲೆ ತೆಂಗಿನಕಾಯಿಯನ್ನು ಒಡೆಯುವ ಮೂಲಕ ಸಮರ್ಪಣೆ ಸಲ್ಲಿಸುತ್ತಾರೆ.
ಇದಕ್ಕಾಗಿ ವರ್ಷದಲ್ಲಿ ನಾಲ್ಕು ದಿನಗಳ ವಾರ್ಷಿಕ ಉತ್ಸವ ನಡೆಯುತ್ತದೆ. ಪ್ರಾಚೀನ ಸಂಪ್ರದಾಯಗಳನ್ನು ಅನುಸರಿಸಿ ಆಧ್ಯಾತ್ಮಿಕ ಆಚರಣೆಗಳ ಭಾಗವಾಗಿ ಪ್ರತಿ ದಿನವೂ ಪ್ರಧಾನ ದೇವತೆಗಳಿಗೆ ಮಹಾ ಮಂಗಳ ಪೂಜೆ ಸೇರಿದಂತೆ ವಿಶೇಷ ಪೂಜೆಗಳನ್ನು ಮಾಡುತ್ತಾರೆ. ಆಚರಣೆಯ ಸಮಾರೋಪ ದಿನದಂದು ನಡೆಸಲಾಗುವ ಸಾಂಪ್ರದಾಯಿಕ ಕಾರ್ಯಕ್ರಮದಲ್ಲಿ ತಲೆಯಿಂದ ತೆಂಗಿನಕಾಯಿ ಒಡೆಯಲಾಗುತ್ತದೆ.