ಚಿಕ್ಕಮಗಳೂರು: ಬಿಂಡಿಗ ದೇವಿರಮ್ಮ ದೇವಿ ದರ್ಶನಕ್ಕೆ ಮುಂದಿನ ವರ್ಷದಿಂದ ಎರಡು ದಿನ ಅವಕಾಶ ವಿಸ್ತರಿಸಲು ದೇವಾಲಯ ವ್ಯವಸ್ಥಾಪನಾ ಮಂಡಳಿ ನಿರ್ಧರಿಸಿದೆ.
ಬೆಟ್ಟ ಏರಿ ಬಿಂಡಿಗ ದೇವಿರಮ್ಮ ದೇವಿ ದರ್ಶನಕ್ಕೆ ವರ್ಷದಲ್ಲಿ ಒಂದು ದಿನ ಮಾತ್ರ ಅವಕಾಶವಿದೆ. ಮುಂದಿನ ವರ್ಷದಿಂದ ಇದನ್ನು ಎರಡು ದಿನಗಳಿಗೆ ವಿಸ್ತರಿಸಲಾಗುವುದು. ಬೆಟ್ಟದ ತಳದಲ್ಲಿರುವ ದೇವಾಲಯದಲ್ಲಿ ಪ್ರತಿಷ್ಠಾಪಿಸಿರುವ ದೇವಿಯ ವಿಗ್ರಹವನ್ನು ನರಕ ಚತುರ್ದಶಿಯ ದಿನ ಬೆಟ್ಟದ ತುದಿಗೆ ಕೊಂಡೊಯ್ದು ಪ್ರತಿಷ್ಠಾಪನೆ ಮಾಡಲಾಗುತ್ತಿತ್ತು. ಒಂದೇ ದಿನ ಹೆಚ್ಚಿನ ಸಂಖ್ಯೆಯ ಭಕ್ತರು ಸೇರುತ್ತಾರೆ.
ಈ ಬಾರಿ ಭಾರೀ ಸಂಖ್ಯೆಯ ಭಕ್ತರು ದರ್ಶನಕ್ಕೆ ಆಗಮಿಸಿದ್ದರಿಂದ ಹೆಚ್ಚಿನವರು ಬಿದ್ದು ಕೈಕಾಲು ಮುರಿದುಕೊಂಡಿದ್ದರು. ಜನ ದಟ್ಟಣೆಯನ್ನು ನಿಯಂತ್ರಿಸಲು ಬೆಟ್ಟ ಹತ್ತಲು ಭಕ್ತರಿಗೆ ಎರಡು ದಿನ ಅವಕಾಶ ನೀಡಲು ದೇವಾಲಯ ವ್ಯವಸ್ಥಾಪನಾ ಸಮಿತಿ ತೀರ್ಮಾನಿಸಿದೆ.
ನರಕ ಚತುರ್ದಶಿ ಹಿಂದಿನ ದಿನ ಬೆಳಗ್ಗೆ ದೇವಿರಮ್ಮ ದೇವಿಯ ವಿಗ್ರಹವನ್ನು ಬೆಟ್ಟದ ತುದಿಯಲ್ಲಿ ಪ್ರತಿಷ್ಠಾಪನೆ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ಮುಂದಿನ ವರ್ಷದಿಂದ ಭಕ್ತರಿಗೆ ಬೆಟ್ಟ ಹತ್ತಲು ಎರಡು ದಿನ ಅವಕಾಶ ಸಿಗಲಿದೆ ಎಂದು ಹೇಳಲಾಗಿದೆ.