ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ವೈರಲ್ ಆರೋಪ ಮಾಡಿರುವ ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಶಿವರಾಮೇಗೌಡ, ಪೆನ್ ಡ್ರೈವ್ ಗೂ ನನಗೂ ಯಾವುದೇ ಸಂಬಂಧವಿಲ್ಲ. ದೆವರಾಜೇಗೌಡ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ದೇವರಾಜೇಗೌಡ ವಿರುದ್ಧ ಮಾನನಷ್ಟ ಮೊಕದ್ದಮೆ ಜೊತೆಗೆ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ತಿಳಿಸಿದ್ದಾರೆ.
ಪ್ರಕರಣದ ತನಿಖೆಗೆ ಎಸ್ಐಟಿ ರಚನೆ ಮಾಡಲಾಗಿದೆ. ತನಿಖೆ ದಿಕ್ಕು ತಪ್ಪಿಸಲು ಬೇರೆ ಬೇರೆ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಪೆನ್ ಡ್ರೈವ್ ವಿಚಾರಕ್ಕೂ ನಮಗೂ, ಡಿ.ಕೆ.ಶಿವಕುಮಾರ್ ಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು.
ಪೆನ್ ಡ್ರೈವ್ ವ್ಯಾಪಾರಕ್ಕಿಟ್ಟವನೇ ಈ ದೇವರಾಜೇಗೌಡ. ವಕೀಲ ದೇವರಾಜೇಗೌಡ ಒಬ್ಬ ನಾಲಾಯಕ್. ಪ್ರಕರಣದ ವಿಚಾರ ಈಗ ಎಲ್ಲೆಲ್ಲೋ ಹೋಗುತ್ತಿದೆ. ಯಾರೂ ಕೂಡ ದೇವರಾಜೇಗೌಡನನ್ನು ನಂಬ ಬೇಡಿ.ಆತ ಒಬ್ಬ ವಂಚಕ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನನಗೆ ಮೊದಲು ದೇವರಾಜೇಗೌಡ ಫೋನ್ ಮಾಡಿದ್ದ. ಡಿ.ಕೆ.ಶಿವಕುಮಾರ್ ಭೇಟಿ ಮಾಡಿಸುವಂತೆ ನನಗೆ ಫೋನ್ ನಲ್ಲಿ ಹೇಳಿದ್ದ. ನಾನು ಆಗಲಿ ಎಂದಿದ್ದೆ. ಈ ಮಾತನ್ನೇ ಇಟ್ಟುಕೊಂಡು ದೇವರಾಜೇಗೌಡ ಸುಳ್ಳು ಮಾಹಿತಿ ನೀಡುತ್ತಿದ್ದಾನೆ. ನನಗೂ ಈ ಪೆನ್ ಡ್ರೈವ್ ಗೂ ಯಾವುದೇ ಸಂಬಂಧವಿಲ್ಲ ಎಂದರು.
ಆತ ಹೀಗೇ ಹೇಳಿಕೊಂಡು ಹೋಗ್ತಾ ಇದ್ರೆ ಎಲ್ಲಿ ತನಕ ಕೇಳುವುದು? ಹುಚ್ಚುನಾಯಿ ಒಳಗೆ ಹೋಯ್ತು ಎಂದುಕೊಂಡಿದ್ದೆ ಆದರೆ ಈ ಹುಚ್ಚುನಾಯಿ ಯಾರನ್ನು ಬೇಕಾದ್ರೂ ಕಡಿಯುತ್ತೆ. ಹಾಗಾಗಿ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಕಿಡಿಕಾರಿದ್ದಾರೆ.