ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಕಾರ್ಯದರ್ಶಿಯಾಗಿ ದೇವಜಿತ್ ಸೈಕಿಯಾ ಮತ್ತು ಖಜಾಂಚಿಯಾಗಿ ಪ್ರಭತೇಜ್ ಸಿಂಗ್ ಭಾಟಿಯಾ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಂಗಳವಾರ ಹಂಚಿಕೆಯಾದ ಸ್ಪರ್ಧಾಕಾಂಕ್ಷಿಗಳ ಅಂತಿಮ ಪಟ್ಟಿಯಲ್ಲಿ ಇವರಿಬ್ಬರ ಹೆಸರು ಮಾತ್ರ ಕಾಣಿಸಿಕೊಂಡಿದೆ.
ಡಿಸೆಂಬರ್ 1 ರಂದು ಐಸಿಸಿ ಅಧ್ಯಕ್ಷರಾಗಿ ಜಯ್ ಶಾ ಅಧಿಕಾರ ವಹಿಸಿಕೊಂಡ ನಂತರ ಬಿಸಿಸಿಐ ಕಾರ್ಯದರ್ಶಿ ಹುದ್ದೆ ಖಾಲಿಯಾಗಿತ್ತು. ಸೈಕಿಯಾ ಅವರನ್ನು ಹಂಗಾಮಿ ಕಾರ್ಯದರ್ಶಿಯಾಗಿ ನೇಮಿಸಲಾಗಿತ್ತು.
ನಾಮಪತ್ರ ಸಲ್ಲಿಸುವ ಗಡುವು ಕಳೆದ ವಾರ ಕೊನೆಗೊಂಡಿದ್ದು, ಮಂಗಳವಾರ ಮಧ್ಯಾಹ್ನ 2 ಗಂಟೆಗೆ ನಾಮಪತ್ರ ಹಿಂಪಡೆಯುವಿಕೆ ಕೊನೆಗೊಂಡಿತ್ತು. ನಾಮನಿರ್ದೇಶನಗಳ ಅಂತಿಮ ಪಟ್ಟಿಯನ್ನು ಬಿಸಿಸಿಐ ಚುನಾವಣಾ ಅಧಿಕಾರಿ ಮತ್ತು ಭಾರತದ ಮಾಜಿ ಮುಖ್ಯ ಚುನಾವಣಾ ಆಯುಕ್ತ ಅಚಲ್ ಕುಮಾರ್ ಜೋತಿ ಮಂಗಳವಾರ ಸಿದ್ಧಪಡಿಸಿದ್ದಾರೆ.
ಜನವರಿ 12 ರಂದು ಬಿಸಿಸಿಐನ ಎಸ್‌ಜಿಎಂ ಹಿನ್ನೆಲೆಯಲ್ಲಿ ಚುನಾವಣೆ ನಡೆಯಲಿದೆ. ಔಪಚಾರಿಕವಾಗಿರುವ ಫಲಿತಾಂಶಗಳನ್ನು ಅದೇ ದಿನ ಪ್ರಕಟಿಸಲಾಗುವುದು.
ಮಂಡಳಿಯ ಅಧ್ಯಕ್ಷ ರೋಜರ್ ಬಿನ್ನಿ ಅವರ ಸಾಂವಿಧಾನಿಕ ಅಧಿಕಾರ ಬಳಸಿ ಸೈಕಿಯಾ ಅವರನ್ನು ಈ ಹಿಂದೆ ಹಂಗಾಮಿ ಕಾರ್ಯದರ್ಶಿಯಾಗಿ ನೇಮಿಸಲಾಗಿತ್ತು.