ಬೆಂಗಳೂರು: ‘ದೇವದಾಸಿಯರ ಮಕ್ಕಳು ಸರ್ಕಾರಿ ಸೌಲಭ್ಯ ಪಡೆಯಲು ತಂದೆಯ ಹೆಸರನ್ನು ದಾಖಲಿಸುವುದು ಕಡ್ಡಾಯವಲ್ಲ, ಅದು ಐಚ್ಚಿಕವಾಗಿರುತ್ತದೆ.’ ಹೀಗೆಂದು ಆದೇಶ ಹೊರಡಿಸಲು ಸರ್ಕಾರ ನಿರ್ಧರಿಸಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್, ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆಯಲ್ಲಿ ದೇವದಾಸಿ ಮಹಿಳೆಯರ ಮತ್ತು ಮಕ್ಕಳ ಕುಂದು ಕೊರತೆ ಪರಿಹಾರ ಸಂಬಂಧ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಶಾಲಾ-ಕಾಲೇಜುಗಳಿಗೆ ಪ್ರವೇಶ ಪಡೆಯುವಾಗ, ಜಾತಿ ಆದಾಯ ಪ್ರಮಾಣ ಪತ್ರ ಸೇರಿದಂತೆ ಯಾವುದೇ ದಾಖಲೆಗಳಲ್ಲಿ ತಂದೆಯ ಹೆಸರು ದಾಖಲಿಸುವುದು ಈ ಮಕ್ಕಳಿಗೆ ಕಡ್ಡಾಯವಿರಬಾರದು. ಕೆಲವು ಕಡೆ ತಂದೆಯ ಹೆಸರು ಕಡ್ಡಾಯವಾಗಿರುವುದರಿಂದ ಸರ್ಕಾರಿ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿದೆ. ಮಕ್ಕಳಿಗೆ ಅವಮಾನವಾಗುತ್ತಿದೆ ಎಂಬುದರ ಕುರಿತಾಗಿ ಸಭೆಯಲ್ಲಿ ಗಂಭೀರ ಚರ್ಚೆ ನಡೆದಿದೆ.
ತಂದೆಯ ಹೆಸರು ನಮೂದಿಸುವುದು ಕಡ್ಡಾಯವಲ್ಲ, ಅವರ ಇಚ್ಛೆಗೆ ಬಿಡಬೇಕು ಎಂದು ಆದೇಶ ಹೊರಡಿಸಲು ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.