ಬೆಂಗಳೂರು: ಬಳ್ಳಾರಿಯ ದೇವದಾರಿ ಬೆಟ್ಟದಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅನುಮತಿ ನೀಡಿ ಆದೇಶ ಹೊರಡಿಸಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ತಡೆ ನೀಡಿದೆ. ಈ ಹಿನ್ನೆಲೆಯಲ್ಲಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ರಾಜ್ಯ ಸರ್ಕಾರದ ನಡುವೆ ಗಣಿ ಗುದ್ದಾಟ ಆರಂಭವಾಗಿದೆ.
ದೇವದಾರಿ ಬೆಟ್ಟದ 401.57 ಹೆಕ್ಟೇರ್ ಅರಣ್ಯ ಭೂಮಿಯಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆ ನಡೆಸದಂತೆ ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆಗೆ ಅರಣ್ಯ ಇಲಾಖೆ ಸೂಚನೆ ನೀಡಿದೆ.
ಈ ಹಿಂದೆ ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆ ಗಣಿಗಾರಿಕೆ ನಡೆಸಿದ ಸಂದರ್ಭದಲ್ಲಿ ಹಲವು ಲೋಪವೆಸಗಿದೆ. ಅರಣ್ಯ ಕಾಯ್ದೆಯನ್ನು ಉಲ್ಲಂಘನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಉನ್ನತಾಧಿಕಾರ ಸಮಿತಿ-ಸಿಇಸಿ ನಿಗದಿತ ಕಾಲಮಿತಿಯೊಳಗೆ ಅರಣ್ಯ ಅಭಿವೃದ್ಧಿಪಡಿಸುವಂತೆ ಸೂಚನೆ ನೀಡಿತ್ತು. ಆದರೆ ಸಿಇಸಿ ನಿರ್ದೇಶನವನ್ನು ಜಾರಿ ಮಾಡುವಲ್ಲಿಯೂ ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆ (KIOCL) ವಿಫಲವಾಗಿದೆ. ಈ ನಿಟ್ಟಿನಲ್ಲಿ ಗಣಿಗಾರಿಕೆ ನಡೆಸದಂತೆ ಅರಣ್ಯ ಇಲಾಖೆ ಸೂಚನೆ ನೀಡಿದೆ.
ಈ ಬಗ್ಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಸ್ಪಷ್ಟನೆ ನೀಡಿದ್ದು, ದೇವದಾರಿ ಬೆಟ್ಟ ಪ್ರದೇಶದಲ್ಲಿ ಗಣಿಗಾರಿಕೆಗೆ ನೀಡಲಿರುವ ಅರಣ್ಯ ಭೂಮಿಯನ್ನು ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆಗೆ ಹಸ್ತಾಂತರಿಸಬಾರದು. ಅರಣ್ಯ ತಿರುವಳಿ ಗುತ್ತಿಗೆ ಪತ್ರಕ್ಕು ಅಧಿಕಾರಿಗಳು ಸಹಿ ಹಾಕಬಾರದು ಎಂದು ಈಗಾಗಲೇ ನಿರ್ದೇಶಿಸಿದ್ದೇವೆ. ದೇವದಾರಿಯಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆ ನಡೆದರೆ ಅರಣ್ಯ ಸಂಪತ್ತು ಹಾಗೂ ಜಲಮೂಲಗಳಿಗೂ ಹಾನಿಯಾಗುತ್ತದೆ. ಈ ಬಗ್ಗೆ 2018ರಲ್ಲಿಯೇ ಕೇಂದ್ರ ಸರ್ಕಾರ ಗಣಿಗಾರಿಕೆಗೆ ನಿರಾಕರಿಸಿದೆ. ಈಗ 2023ರಲ್ಲಿ ಕೆಲ ಷರತ್ತುಗಳ ಮೇರೆಗೆ ಮೊದಲ ಹಂತದ ಗಣಿಗಾರಿಕೆಗೆ ಒಪ್ಪಿಗೆ ನೀಡಲಾಗಿದೆ. ಅನುಮತಿ ಸಿಕ್ಕ ತಕ್ಷಣ ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆ ಗಣಿಗಾರಿಕೆಗೆ ಮುಂದಾಗಿತ್ತು. ಆದರೆ ಈ ಹಿಂದೆ ನಿಯಮ ಉಲ್ಲಂಘನೆ ಆಗಿರುವ ಹಿನ್ನೆಲೆಯಲ್ಲಿ ಈಗ ಸಂಸ್ಥೆಗೆ ಗಣಿಗಾರಿಕೆಗೆ ತಡೆ ನೀಡಿದ್ದೇವೆ ಎಂದು ತಿಳಿಸಿದ್ದಾರೆ