ಪ್ರಧಾನಿ ನರೇಂದ್ರ ಮೋದಿಯವರ ಸ್ನಾತಕೋತ್ತರ ಪದವಿಯ ಪೂರ್ಣ ವಿವರ ನೀಡುವಂತೆ ಕೇಂದ್ರ ಮಾಹಿತಿ ಆಯೋಗ, ಗುಜರಾತ್ ವಿಶ್ವವಿದ್ಯಾಲಯಕ್ಕೆ ನೀಡಿದ್ದ ಆದೇಶವನ್ನು ರದ್ದುಗೊಳಿಸಿರುವ ಗುಜರಾತ್ ಹೈಕೋರ್ಟ್, ಈ ಮಾಹಿತಿಗಾಗಿ ಅರ್ಜಿ ಸಲ್ಲಿಸಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗೆ ದಂಡ ವಿಧಿಸಿದೆ.
ಕೇಂದ್ರ ಮಾಹಿತಿ ಆಯೋಗದ ಆದೇಶವನ್ನು ಪ್ರಶ್ನಿಸಿ, ಗುಜರಾತ್ ವಿಶ್ವವಿದ್ಯಾಲಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಬಿರೇನ್ ವೈಷ್ಣವ್, ಪ್ರಧಾನಿಯವರ ಪದವಿ ಮಾಹಿತಿಯನ್ನು ವ್ಯಕ್ತಿಯೊಬ್ಬರಿಗೆ ನೀಡುವ ಅಗತ್ಯವಿಲ್ಲ ಎಂದು ಹೇಳಿದರಲ್ಲದೆ, ಈ ಮಾಹಿತಿ ಕೋರಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ 25,000 ರೂಪಾಯಿ ದಂಡ ವಿಧಿಸಲಾಗಿದ್ದು, ಇದನ್ನು ಪಾವತಿಸಲು ನಾಲ್ಕು ವಾರಗಳ ಗಡುವು ನೀಡಲಾಗಿದೆ.
ನರೇಂದ್ರ ಮೋದಿಯವರ ಸ್ನಾತಕ ಪದವಿ ಪ್ರಮಾಣ ಪತ್ರದ ಮಾಹಿತಿ ನೀಡುವಂತೆ ಕೋರಿ ದೆಹಲಿ ಮುಖ್ಯಮಂತ್ರಿ, ಅರವಿಂದ್ ಕೇಜ್ರಿವಾಲ್ ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸಿದ್ದು, ಈ ಹಿನ್ನೆಲೆಯಲ್ಲಿ ಆಯೋಗದ ಮುಖ್ಯಸ್ಥ ಎಂ. ಶ್ರೀಧರ ಆಚಾರ್ಯ ದಾಖಲೆ ಸಮೇತ ಸಂಪೂರ್ಣ ಮಾಹಿತಿ ನೀಡುವಂತೆ ದೆಹಲಿ ಹಾಗೂ ಗುಜರಾತ್ ವಿಶ್ವವಿದ್ಯಾಲಯಕ್ಕೆ ಆದೇಶ ನೀಡಿದ್ದರು. ಇದನ್ನು ಪ್ರಶ್ನಿಸಿ ಗುಜರಾತ್ ವಿಶ್ವವಿದ್ಯಾಲಯ ಹೈಕೋರ್ಟ್ ಮೆಟ್ಟಿಲೇರಿತ್ತು.