ಅಕ್ರಮ ಮದ್ಯ ಮಾರಾಟದ ವಿರುದ್ಧ ಬಿಹಾರ ಸರ್ಕಾರ ಕಠಿಣ ನಿಲುವು ತೆಗೆದುಕೊಂಡಿದ್ದರೂ ಸಹ ರಾಜ್ಯದಲ್ಲಿ ಮದ್ಯದ ಕಳ್ಳಸಾಗಾಟಕ್ಕೆ ಎಲ್ಲೆಯೇ ಇಲ್ಲವೆಂಬಂತಾಗಿದೆ.
ಮದಿರೆಯ ನಶೆಯಲ್ಲಿ ತೇಲಾಡುತ್ತಿರುವ ಜನರ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಈಗಲೂ ಸದ್ದು ಮಾಡುತ್ತಿವೆ. ಇಂಥದ್ದೇ ಘಟನೆಯೊಂದರಲ್ಲಿ ಕಿಶಾನ್‌ಗಂಜ್ ಜಿಲ್ಲೆಯ ಶಾಲೆಯೊಂದರ ಶಿಕ್ಷಕರು ಮದ್ಯಪಾನದ ಮೋಜಿನಲ್ಲಿ ಮುಳುಗಿರುವ ವಿಡಿಯೋವೊಂದು ವೈರಲ್ ಆಗಿದೆ.
ಈ ವಿಡಿಯೋ ಕಿಶಾನ್‌ಗಂಜ್‌ನ ಬಹದ್ದೂರ್‌ಗಂಜ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಶಾಲೆಯೊಂದರಲ್ಲಿ ರೆಕಾರ್ಡ್ ಆಗಿದೆ ಎಂದು ಉಪ-ವಿಭಾಗದ ಪೊಲೀಸ್ ಅಧಿಕಾರಿ ಅನ್ವರ್ ಜಾವೆದ್ ಅನ್ಸಾರಿ ತಿಳಿಸಿದ್ದಾರೆ. ಘಟನೆ ಸಂಬಂಧ ಪ್ರಕರಣವೊಂದನ್ನು ದಾಖಲಿಸಲಾಗಿದೆ ಎಂದು ಅನ್ಸಾರಿ ತಿಳಿಸಿದ್ದಾರೆ. ವಿಡಿಯೋದಲ್ಲಿರುವ ಶಿಕ್ಷಕರನ್ನು ಗುರುತಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಲೈಂಗಿಕಾಸಕ್ತಿ ಇಲ್ಲದವರಿಗಾಗಿ ಡೇಟಿಂಗ್ ಅಪ್ಲಿಕೇಶನ್…!
ಪೊಲೀಸರು ರೇಡ್ ಮಾಡುತ್ತಿದ್ದು, ಬಂಧನ ಮಾಡುವ ಸಾಧ್ಯತೆ ಇರುವ ಕಾರಣ ಶಾಲೆಯ ಮುಖ್ಯ ಶಿಕ್ಷಕ ತೌಕಿರ್ ಆಲಂ ಹಾಗೂ ಸಹ ಶಿಕ್ಷಕ ದೇವ್ ಲಾಲ್ ಪಲಾಯನಗೈದಿದ್ದಾರೆ ಎನ್ನಲಾಗಿದೆ. ಆಪಾದಿತರನ್ನು ಕೂಡಲೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಮದ್ಯ ವಿರೋಧಿ ಅಭಿಯಾನದ ಅಂಗವಾಗಿ ಪಟನಾ ಪೊಲೀಸರು ನಗರದ 60 ಹೊಟೇಲ್‌ಗಳು ಹಾಗೂ ಮದುವೆ ಮನೆಗಳ ಮೇಲೆ ದಾಳಿ ಮಾಡಿದ್ದಾರೆ. ಮದ್ಯ ಪೂರೈಕೆ ಹಾಗೂ ಸೇವನೆಯ ಆರೋಪದ ಮೇಲೆ ಪೊಲೀಸರು ಬಹಳಷ್ಟು ಮಂದಿಯನ್ನು ಬಂಧಿಸಿದ್ದೂ ಆಗಿದೆ.
ಮದುವೆ ಮನೆಗಳನ್ನೂ ಬಿಡದೇ ರೇಡ್ ಮಾಡಲಾಗುತ್ತಿದೆ ಎಂದು ವಿರೋಧ ಪಕ್ಷ ಆರ್‌ಜೆಡಿಯ ನಾಯಕಿ ಹಾಗೂ ಮಾಜಿ ಮುಖ್ಯಮಂತ್ರಿ ರಾಬರಿ ದೇವಿ ಆಪಾದನೆ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ನಿತೀಶ್ ಕುಮಾರ್, ತಮಗೆ ಸಿಕ್ಕ ದೂರುಗಳ ಆಧಾರದಲ್ಲಿ ಪೊಲೀಸರು ರೇಡ್‌ಗಳನ್ನು ಮಾಡುತ್ತಿದ್ದಾರೆ ಎಂದಿದ್ದಾರೆ.
ಜನಸಾಮಾನ್ಯರಿಗೆ ಬಿಗ್ ಶಾಕ್: ಸಾರ್ವಕಾಲಿಕ ದಾಖಲೆ ಬರೆದ ಟೊಮೆಟೊ ದರ; 15 ಕೆಜಿ ಬಾಕ್ಸ್ ಗೆ 3100 ರೂ.
ಮದ್ಯಪಾನ ಮಾಡದ ಹಾಗೂ ಹೆಂಡ ಪೂರೈಕೆ ಮಾಡದ ಮಂದಿ ಚಿಂತಿಸಬೇಕಾದ ಅಗತ್ಯವಿಲ್ಲ ಎಂದು ನಿತೀಶ್ ಕುಮಾರ್ ತಿಳಿಸಿದ್ದು, ಬಿಹಾರ ರಾಜ್ಯ ಸರ್ಕಾರದ ಉದ್ಯೋಗಿಗಳೆಲ್ಲಾ ಇದೇ ನವೆಂಬರ್ 26ರಂದು ಮದ್ಯಪಾನ ಮಾಡುವುದಿಲ್ಲವೆಂದು ಶಪಥಗೈದಿದ್ದಾರೆ ಎಂದಿದ್ದಾರೆ.
ಬಿಹಾರದಲ್ಲಿ ಮದ್ಯಪಾನ ಹಾಗೂ ಮದ್ಯದ ಮಾರಾಟದ ಮೇಲೆ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಪೊಲೀಸರಿಗೆ ಸೂಚನೆಗಳನ್ನು ನೀಡಲಾಗಿದ್ದು, ಈ ಅಪರಾಧದ ಸಂಬಂಧ ಯಾರನ್ನೂ ಬಿಡಬೇಡಿ ಎಂದು ತಿಳಿಸಲಾಗಿದೆ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.