
ಪರೀಕ್ಷೆಯ ಸಮಯದಲ್ಲಿ ನಕಲು ಮಾಡುವ ವಿಷಯಕ್ಕೆ ಬಂದರೆ ಅಭ್ಯಥಿರ್ಗಗಳು ಅನೇಕ ಬೆಚ್ಚಿ ಬೀಳುವ ಸಾಹಸ ಮಾಡುತ್ತಾರೆ. ಹೊಸ ತಂತ್ರಜ್ಞಾನಗಳನ್ನೂ ಬಳಸಿ ಯಾಮಾರಿಸುವುದುಂಟು.
ಇಲ್ಲೊಬ್ಬ ಮಹಾಶಯ ರೈಲ್ವೇ ಉದ್ಯೋಗವನ್ನು ಪಡೆಯಲೇ ಬೇಕೆಂಬ ಹಠ ತೊಟ್ಟು ಸಾಹವೊಂದಕ್ಕೆ ಕೈ ಹಾಕಿದ್ದಾನೆ. ಅಭ್ಯರ್ಥಿಯು ತನ್ನ ಹೆಬ್ಬೆರಳಿನ ಚರ್ಮವನ್ನು ಬಿಸಿ ಪ್ಯಾನ್ ಬಳಸಿ ತೆಗೆದು, ತನ್ನ ಸ್ನೇಹಿತನ ಹೆಬ್ಬೆರಳಿಗೆ ಅಂಟಿಸಿದ್ದಾನೆ, ನಂತರ ಅವನು ಬಯೋಮೆಟ್ರಿಕ್ ಪರಿಶೀಲನೆಯನ್ನು ಪೂರ್ಣಗೊಳಿಸಿ ಸ್ನೇಹಿತನಿಂದ ಪರೀಕ್ಷೆ ಬರೆಸುವ ಪ್ರಯತ್ನದಲ್ಲಿದ್ದನು.
ಆದರೆ ಈ ಯೋಜನೆ ಫಲ ಕೊಡಲಿಲ್ಲ. ಆಗಸ್ಟ್ 22ರಂದು ಗುಜರಾತ್ನ ವಡೋದರಾ ನಗರದಲ್ಲಿ ನಡೆದ ರೈಲ್ವೇ ನೇಮಕಾತಿ ಪರೀಕ್ಷೆಯ ಮೊದಲು ಬಯೋಮೆಟ್ರಿಕ್ ಪರಿಶೀಲನೆಯ ಸಂದರ್ಭದಲ್ಲಿ ಪರೀಕ್ಷಾ ಮೇಲ್ವಿಚಾರಕರು ಕೈ ಮೇಲೆ ಸ್ಯಾನಿಟೈಸರ್ ಸಿಂಪಡಿಸಿದಾಗ ನಕಲಿ ಅಭ್ಯರ್ಥಿ ಕೈಗೆ ಅಂಟಿಸಲಾಗಿದ್ದ ಹೆಬ್ಬೆರಳಿನ ಚರ್ಮವು ಉದುರಿಹೋಗಿದೆ.
ಈ ಪ್ರಕರಣದಲ್ಲಿ 20 ವರ್ಷದ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ವಡೋದರದ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ಪ್ರಕಾರ, ಆಗಸ್ಟ್ 22 ರಂದು ಇಲ್ಲಿನ ಕಟ್ಟಡವೊಂದರಲ್ಲಿ ಡಿ ಗ್ರೂಪ್ ಹುದ್ದೆಗಳಿಗೆ ನೇಮಕಾತಿ ಪರೀಕ್ಷೆ ಏರ್ಪಡಿಸಿತ್ತು, ಇದರಲ್ಲಿ 600 ಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಿದ್ದರು.
ಮೋಸವನ್ನು ತಡೆಗಟ್ಟಲು ಎಲ್ಲಾ ಅಭ್ಯರ್ಥಿ ತಮ್ಮ ಹೆಬ್ಬೆರಳಿನ ಗುರುತನ್ನು ನೀಡಬೇಕಾಗಿತ್ತು, ನಂತರ ಪರೀಕ್ಷೆಯ ಮೊದಲು ಬಯೋಮೆಟ್ರಿಕ್ ಸಾಧನದ ಮೂಲಕ ಅವರ ಆಧಾರ್ ಡೇಟಾದೊಂದಿಗೆ ಹೊಂದಾಣಿಕೆ ಮಾಡಲಾಯಿತು.
ಆ ಸಮಯದಲ್ಲಿ, ಪದೇ ಪದೇ ಪ್ರಯತ್ನಿಸಿದರೂ ಮನೀಶ್ ಕುಮಾರ್ ಎಂಬ ಅಭ್ಯರ್ಥಿಯ ಹೆಬ್ಬೆರಳಿನ ಗುರುತನ್ನು ರಿಜಿಸ್ಟರ್ ಮಾಡಿಕೊಳ್ಳುವಲ್ಲಿ ಸಾಧನವು ವಿಫಲವಾಯಿತು, ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಭ್ಯರ್ಥಿ ತನ್ನ ಎಡಗೆೈಯನ್ನು ಪ್ಯಾಂಟ್ನ ಜೇಬಿನೊಳಗೆ ಮರೆಮಾಚಲು ಪ್ರಯತ್ನಿಸುತ್ತಿರುವುದನ್ನು ಗಮನಿಸಿದ ಪರೀಕ್ಷಾ ಮೇಲ್ವಿಚಾರಕರಿಗೆ ಅನುಮಾನ ಬಂದಿದೆ. ಹೀಗಾಗಿ ಮೇಲ್ವಿಚಾರಕರು ಆತನ ಎಡಗೆೈ ಹೆಬ್ಬೆರಳಿಗೆ ಸ್ಯಾನಿಟೈಸರ್ ಸಿಂಪಡಿಸಿದಾಗ, ಅದರ ಮೇಲೆ ಅಂಟಿಸಲಾದ ಚರ್ಮವು ಉದುರಿಹೋಯಿತು ಎಂದು ವಿವರಿಸಿದ್ದಾರೆ.
ಸಿಕ್ಕಿಬಿದ್ದ ವ್ಯಕ್ತಿ ತನ್ನ ನಿಜವಾದ ಹೆಸರು ರಾಜ್ಯಗುರು ಗುಪ್ತ ಎಂದು ಪೊಲೀಸರಿಗೆ ತಿಳಿಸಿದ್ದು, ತನ್ನ ಸ್ನೇಹಿತ ಮನೀಶ್ ಕುಮಾರ್ ಎಂದು ಹೇಳಿ ಪರೀಕ್ಷೆಗೆ ಹಾಜರಾಗಲು ಬಂದಿದ್ದ. ಗುಪ್ತಾ ಅಧ್ಯಯನದಲ್ಲಿ ಉತ್ತಮನಾಗಿದ್ದರಿಂದ, ರೈಲ್ವೆ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದ್ದ ಮನೀಶ್ ಕುಮಾರ್, ನಕಲಿ ಗುರುತಿನ ಮೂಲಕ ಗುಪ್ತಾನನ್ನು ನೇಮಕಾತಿ ಪರೀಕ್ಷೆಗೆ ಕಳುಹಿಸಿದ್ದ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.