ಮ್ಯಾಟ್ರಿಮೋನಿಯಲ್ ಸೈಟ್‌ಗಳಲ್ಲಿ ಜೀವನ ಸಂಗಾತಿಗಳನ್ನು ಅನ್ವೇಷಿಸುವುದು ವಾಡಿಕೆ. ಆದರೆ, ತನ್ನ ಸಂಸ್ಥೆಯೊಂದರಲ್ಲಿ ಖಾಲಿ ಹುದ್ದೆಗೆ ಅರ್ಹರನ್ನು ಆಯ್ಕೆ ಮಾಡಲು ಈ ವೇದಿಕೆಯನ್ನು ಯುವತಿಯೊಬ್ಬಳು ಬಳಸಿಕೊಂಡಿರುವುದು ಮಿಶ್ರ ಪ್ರತಿಕ್ರಿಯೆಗಳನ್ನು ಸ್ವೀಕರಿಸಿದೆ.
ಭಾರತೀಯ ಯುವಜನತೆ ವಿವಾಹ ವೇದಿಕೆಗಳಲ್ಲಿ ತಮ್ಮ ಪ್ರೊಫೈಲ್ ಹಾಕಿ, ಸೂಕ್ತ ಸಂಗಾತಿಗಾಗಿ ಹುಡುಕಾಡುತ್ತಾರೆ. ಬಳಿಕ ವೈಯಕ್ತಿಕವಾಗಿ ಭೇಟಿಯಾಗಿ ತಾವು ಮದುವೆಯಾಗಲು, ಹೆತ್ತವರ ಕನಸಿನ ಜೋಡಿಯನ್ನು ಹೊಂದಲು ಮತ್ತು ಸುಖವಾಗಿರಲು ಸಾಧ್ಯವೇ ಎಂದು ನೋಡುತ್ತಾರೆ. ಆದರೆ, ಈ ಯುವತಿ ಮ್ಯಾಟ್ರಿಮೋನಿಯಲ್ ಸೈಟ್ ಒಂದನ್ನು ತುಂಬ ಕುತೂಹಲಕರ ಹಾಗೂ ಗರಿಷ್ಠ ಸಾಧ್ಯ ಸೃಜನಶೀಲ ರೀತಿಯಲ್ಲಿ ಬಳಸಿಕೊಂಡು ಗಮನ ಸೆಳೆದಿದ್ದಾರೆ.
ಅಂತಾರಾಷ್ಟ್ರೀಯ ವಹಿವಾಟುಗಳನ್ನು ಸುಗಮಗೊಳಿಸುವ Salt.Pe ಎಂಬ ಫಿನ್-ಟೆಕ್ ವೇದಿಕೆಯ ಸಂಸ್ಥಾಪಕಿ ಉದಿತಾ ಪಾಲ್ ಎಂಬಾಕೆ, ತನ್ನ ತಂದೆಯ ಜತೆಗೆ ಹಂಚಿಕೊಂಡ ಸಂಭಾಷಣೆಯೊಂದರ ಸ್ಕ್ರೀನ್ ಶಾಟ್, ತಾನು ಮ್ಯಾಟ್ರಿಮೋನಿಯಲ್ ಸೈಟ್ ಅನ್ನು ಹೇಗೆ ವಿಶಿಷ್ಟವಾಗಿ ಬಳಸಿಕೊಂಡೆ ಎಂಬುದನ್ನು ತೋರಿಸುತ್ತದೆ.
BIG NEWS: ರಾಜ್ಯದಲ್ಲಿ BA.2.12 ಹೊಸ ರೂಪಾಂತರಿ ವೈರಸ್ ಪತ್ತೆ
ಈ ವೆಬ್‌ಸೈಟ್‌ನಲ್ಲಿ ಸಂಭಾವ್ಯ ವರನನ್ನು ಹುಡುಕುವ ಬದಲು ತನ್ನ ಫಿನ್-ಟೆಕ್ ಸಂಸ್ಥೆಗೆ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳಲು ಉದಿತಾ ಪ್ರಯತ್ನಿಸಿದ್ದಾರೆ. ಉದಿತಾ ಅವರ ತಂದೆ ನಾವು ಮಾತನಾಡಬಹುದೇ ? ಈಗಲೇ ಎಂದು ಸಂದೇಶ ಕಳುಹಿಸಿದ್ದಾರೆ. ಬಳಿಕ, ಆ ಹುಡುಗನ ರೆಸ್ಯೂಮ್ ಕೇಳಿ ನೀನು ಅದು ಹೇಗೆ ಅವನಿಗೆ ಇಂಟರ್ವ್ಯೂ ಲಿಂಕ್ ಕಳುಹಿಸಿದೆ ಎಂದು ಪ್ರಶ್ನಿಸಿದ್ದಾರೆ. ನೀನೇನು ಮಾಡಿದ್ದೀ ಎಂದು ನಿನಗೆ ಗೊತ್ತೇ ? ಮ್ಯಾಟ್ರಿಮೋನಿಯಲ್ ಸೈಟ್‌ಗಳಲ್ಲಿ ಹುಡುಕಿ ಅಭ್ಯರ್ಥಿಗಳನ್ನು ಕೆಲಸಕ್ಕೆ ತೆಗೆದುಕೊಳ್ಳಲು ಸಾಧ್ಯವಿಲ್ಲ. ಆ ಹುಡುಗನ ಅಪ್ಪನಿಗೆ ಈಗ ನಾನೇನು ಹೇಳಲಿ ? ಎಂದು ಅಲವತ್ತುಕೊಂಡಿದ್ದಾರೆ. ಆದರೆ, ಉದಿತಾ ಅದಕ್ಕೆ ಉತ್ತರಿಸಿದ್ದು ಹೀಗೆ: “ಫಿನ್‌ಟೆಕ್‌ನಲ್ಲಿ ಏಳು ವರ್ಷಗಳ ಅನುಭವ ಅದ್ಭುತವಾಗಿದೆ. ನನ್ನನ್ನು ಕ್ಷಮಿಸಿ.” ಎಂದು.
ಅಪ್ಪ ತನ್ನೊಂದಿಗೆ ವಾಟ್ಸ್ ಆಪ್‌ನಲ್ಲಿ ನಡೆಸಿದ ಸಂಭಾಷಣೆಯ ಸ್ಕ್ರೀನ್‌ಗ್ರ್ಯಾಬ್ ಹಂಚಿಕೊಂಡಿರುವ ಉದಿತಾ, “ಅಪ್ಪನ ಅಸಮ್ಮತಿ ಎಂದರೆ ಹೀಗಿರುತ್ತದೆ” ಎಂದು ಬರೆದುಕೊಂಡಿದ್ದಾರೆ.
ಮುಂದಿನ ಟ್ವೀಟ್‌ನಲ್ಲಿ ಅವರು “ಅಪ್ಡೇಟೆಡ್ ನ್ಯೂಸ್” ಎಂದು ಹೇಳಿ, “ಅವನಿಗೆ ವರ್ಷಕ್ಕೆ 62 ಲಕ್ಷ ಸಂಬಳ ಹಾಗೂ ಭತ್ಯೆಗಳು ಬೇಕಂತೆ” ಎಂದು ಹೇಳಿ, ತನ್ನಿಂದ ಅಷ್ಟು ಭರಿಸಲಾಗದು, ಹೀಗಾಗಿ ನೇಮಕಾತಿ ಸಾಧ್ಯವಾಗಿಲ್ಲ ಎಂಬ ಸುಳಿವನ್ನು ಕೊಟ್ಟಿದ್ದಾರೆ. ಈ ಸ್ವಾರಸ್ಯಕರ ಘಟನೆಯನ್ನು ಸಾಕಷ್ಟು ಮಂದಿ ಮೆಚ್ಚಿಕೊಂಡಿದ್ದಾರೆ.