ಬೆಂಗಳೂರು: ರಾಜ್ಯದಲ್ಲಿ ಮಧ್ಯಪ್ರದೇಶ ಮಾದರಿಯಲ್ಲಿ ಹನಿ ನೀರಾವರಿ ಯೋಜನೆ ಜಾರಿಗೊಳಿಸುವ ಚಿಂತನೆ ಇದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಜಲ ಸಂಪನ್ಮೂಲ ಖಾತೆ ಹೊಂದಿರುವ ಡಿ.ಕೆ. ಶಿವಕುಮಾರ್ ಅವರು ವಿಧಾನ ಪರಿಷತ್ ನಲ್ಲಿ ಸದಸ್ಯ ಶರಣಗೌಡ ಬಯ್ಯಾಪುರ ಅವರ ಪ್ರಶ್ನೆಗೆ ಉತ್ತರ ನೀಡಿ, ಶೀಘ್ರವೇ ಮಧ್ಯಪ್ರದೇಶಕ್ಕೆ ತೆರಳಿ ಅಧ್ಯಯನ ನಡೆಸಿ ಬಳಿಕ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಮಳವಳ್ಳಿ, ಶಿಗ್ಗಾಂವಿ, ಹುನಗುಂದ ಮೊದಲಾದ ಕಡೆಗಳಲ್ಲಿ ಜಾರಿಗೊಳಿಸಿದ ಹನಿ ನೀರಾವರಿ ಯೋಜನೆ ವಿಫಲವಾಗಿದ್ದು, ರೈತರು ಹಲವೆಡೆ ಕೊಳವೆ ಮಾರ್ಗ ಕಿತ್ತು ಹಾಕುತ್ತಾರೆ. ಇದರಿಂದ ನಿರ್ವಹಣೆ ಸವಾಲಾಗಿದೆ. ಮಧ್ಯಪ್ರದೇಶ ಮಾದರಿಯಲ್ಲಿ ರಾಜ್ಯದ ರೈತರ ಜಮೀನಿನವರೆಗೂ ನೀರನ್ನು ತಲುಪಿಸುವ ಜವಾಬ್ದಾರಿಯನ್ನು ಸರ್ಕಾರ ತೆಗೆದುಕೊಂಡು ಜಮೀನಿನ ಒಳಗೆ ನೀರು ಬಳಸಿಕೊಳ್ಳುವ ಜವಾಬ್ದಾರಿಯನ್ನು ರೈತರಿಗೆ ವಹಿಸುವ ಚಿಂತನೆ ನಡೆದಿದೆ. ನಮ್ಮ ರೈತರು ಹನಿ ನೀರಾವರಿ ವಿಚಾರದಲ್ಲಿ ಯೋಜಿತವಾಗಿ ಆಲೋಚನೆ ಮಾಡುತ್ತಿಲ್ಲ. ಅನೇಕ ಕಡೆಗಳಲ್ಲಿ ಹನಿ ನೀರಾವರಿಗೆ ಇಡುವ ಪೈಪ್‌ಗಳನ್ನು ಕಿತ್ತೆಸೆದಿರುವುದು ಗಮನಕ್ಕೆ ಬಂದಿದೆ ಎಂದು ಹೇಳಿದ್ದಾರೆ.