ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನಾ ಕೃತ್ಯಗಳು ಹೆಚ್ಚಾದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಗುರುವಾರ ಪರಿಶೀಲನಾ ಸಭೆ ನಡೆಸಿದ್ದಾರೆ.
ಯಾತ್ರಾರ್ಥಿಗಳ ಬಸ್ ಮೇಲೆ ದಾಳಿ ಹಾಗೂ ಯೋಧರ ಮೇಲೆ ಭಯೋತ್ಪಾದಕ ದಾಳಿ ನಂತರ ನಿರಂತರವಾಗಿ ಉಗ್ರರ ದಾಳಿಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಭೆ ನಡೆಸಿದ ಮೋದಿ ಭಯೋತ್ಪಾದನಾ ನಿಗ್ರಹಕ್ಕೆ ಸಂಪೂರ್ಣ ಸಾಮರ್ಥ್ಯ ಬಳಕೆ ಮಾಡಿರುವಂತೆ ಸೇನೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸೇರಿದಂತೆ ಉನ್ನತ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಹೆಚ್ಚುವರಿ ಭದ್ರತಾ ಸಿಬ್ಬಂದಿ ನಿಯೋಜನೆ ಸೇರಿ ಭಯೋತ್ಪಾದನೆ ನಿಗ್ರಹ ಕಾರ್ಯತಂತ್ರಗಳ ಕುರಿತಾಗಿ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ.
ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದುಕೊಂಡ ಮೋದಿ, ಸ್ಥಳೀಯ ಆಡಳಿತಗಳ ಮೂಲಕ ಕೈಗೊಂಡ ಕ್ರಮಗಳ ಬಗ್ಗೆ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಜೊತೆಗೆ ಚರ್ಚೆ ನಡೆಸಿದ್ದಾರೆ. ಕಳೆದ 4 ದಿನಗಳ ಅವಧಿಯಲ್ಲಿ ಜಮ್ಮು ಕಾಶ್ಮೀರದ ರಿಯಾಸಿ, ಕಥುವಾ ದೋಡಾ ಜಿಲ್ಲೆಗಳ ವ್ಯಾಪ್ತಿಯಲ್ಲಿ ನಾಲ್ಕು ಕಡೆ ಭಯೋತ್ಪಾದಕರು ದಾಳಿ ನಡೆಸಿದ್ದಾರೆ.