ಇಸ್ರೇಲ್ ಮತ್ತು ಹಮಾಸ್ ನಡುವಣ ಯುದ್ಧ ದಿನೇ ದಿನೇ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಯುದ್ಧದಿಂದಾಗಿ ಇದುವರೆಗೆ ಸಾವಿರಾರು ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಲಕ್ಷಾಂತರ ಜನರು ನಿರಾಶ್ರಿತರಾಗಿದ್ದಾರೆ. ಈ ಯುದ್ಧದ ಗಂಭೀರ ಪರಿಣಾಮ ಗಾಜಾದ ನಿವಾಸಿಗಳ ಮೇಲಾಗಿದೆ. ಇಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಖುದ್ದು ವಿಶ್ವಸಂಸ್ಥೆ ಈ ಬಗ್ಗೆ ಮಾಹಿತಿ ನೀಡಿದೆ. ಇದುವರೆಗೆ 1 ಮಿಲಿಯನ್ ಜನರು ಗಾಜಾವನ್ನು ತೊರೆದಿದ್ದಾರೆ. ಕದನ ವಿರಾಮ ಘೋಷಿಸುವಂತೆ ವಿಶ್ವಸಂಸ್ಥೆ ಉಭಯ ಪಡೆಗಳಲ್ಲಿ ಮನವಿ ಮಾಡಿದೆ.
ಯುದ್ಧದಿಂದಾಗಿ ಗಾಜಾ ಪಟ್ಟಿಯಲ್ಲಿರುವ ಪ್ಯಾಲೆಸ್ತೀನಿಯರು ನೆಲೆ ಕಳೆದುಕೊಳ್ಳುವಂತಾಗಿದೆ. ಗಾಜಾದಲ್ಲಿ ವಾಸಿಸುವ ಜನರಿಗೆ ಅಗತ್ಯ ವಸ್ತುಗಳು ಸಿಗುತ್ತಿಲ್ಲ. ಆಹಾರ, ನೀರು ಸೇರಿದಂತೆ ಇನ್ನಿತರ ಅಗತ್ಯ ವಸ್ತುಗಳ ಕೊರತೆ ಎದುರಾಗಿದೆ. ಸಂತ್ರಸ್ತರ ಪರಿಸ್ಥಿತಿ ನೋಡಿ ಮರುಗಿರುವ ವಿಶ್ವಸಂಸ್ಥೆ, ಅವರಿಗೆ ನೆರವಾಗುವ ನಿಟ್ಟಿನಲ್ಲಿ ಮಾನವೀಯತೆ ದೃಷ್ಟಿಯಿಂದ ಕದನ ವಿರಾಮಕ್ಕೆ ಮನವಿ ಮಾಡಿಕೊಂಡಿದೆ.
10 ಲಕ್ಷ ಜನರು ನಿರಾಶ್ರಿತ
ಗಾಜಾಪಟ್ಟಿಯಲ್ಲಿ ರಾಕೆಟ್, ಮಿಸೈಲ್ ಹಾಗೂ ಬಾಂಬ್‌ಗಳ ಅಬ್ಬರ ನಿರಂತರವಾಗಿರುವುದರಿಂದ ಪ್ರಾಣ ಉಳಿಸಿಕೊಳ್ಳಲು ಸುಮಾರು 10 ಲಕ್ಷ ಜನರು ತಮ್ಮ ಮನೆಗಳನ್ನು ತೊರೆದು ಗಾಜಾದ ಇತರ ಭಾಗಗಳಿಗೆ ತೆರಳಿದ್ದಾರೆ. ಈ ಬಗ್ಗೆ ವಿಶ್ವಸಂಸ್ಥೆ ಹಿರಿಯ ಅಧಿಕಾರಿ ಜಾಯ್ಸ್ ಮ್ಸುಯಾ ಮಾಹಿತಿ ನೀಡಿದ್ದಾರೆ. ಕ್ಷಿಪಣಿಗಳಿಂದ ತಪ್ಪಿಸಿಕೊಳ್ಳಲು ನಾಗರಿಕರಿಗೆ ಸ್ಥಳವಿಲ್ಲ, ಇಲ್ಲಿನ ಜನರು ಆಹಾರ, ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ ಎಂದವರು ಕಳವಳ ವ್ಯಕ್ತಪಡಿಸಿದ್ದಾರೆ.
ಗಲ್ಫ್ ಕಾರ್ಪೊರೇಷನ್ ಕೌನ್ಸಿಲ್‌ನಿಂದ ನೆರವು
ಈ ಮಧ್ಯೆ ಗಲ್ಫ್ ಕಾರ್ಪೊರೇಷನ್ ಕೌನ್ಸಿಲ್, ಗಾಜಾ ಪಟ್ಟಿಗೆ 100 ಮಿಲಿಯನ್ ಡಾಲರ್ ತುರ್ತು ಸಹಾಯವನ್ನು ಘೋಷಿಸಿದೆ. ಗಲ್ಫ್ ಕಾರ್ಪೊರೇಷನ್ ಕೌನ್ಸಿಲ್‌ನ ವಿದೇಶಾಂಗ ಮಂತ್ರಿಗಳು ಮಸ್ಕತ್‌ನಲ್ಲಿ ನಡೆದ ಸಭೆಯ ನಂತರ 100 ಮಿಲಿಯನ್ ಡಾಲರ್ ನೆರವಿನ ಘೋಷಣೆ ಮಾಡಿದ್ದಾರೆ. ಅದೇ ಸಮಯದಲ್ಲಿ ಆರು ಗಲ್ಫ್ ಕಾರ್ಪೊರೇಷನ್ ಕೌನ್ಸಿಲ್ ದೇಶಗಳಾದ ಬಹ್ರೇನ್, ಕುವೈತ್, ಓಮನ್, ಕತಾರ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ನ ಉನ್ನತ ರಾಜತಾಂತ್ರಿಕರು ಭೇಟಿಯಾಗಿದ್ದಾರೆಂದು ಹಮಾಸ್ ಹೇಳಿದೆ.