ಬೆಂಗಳೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ 2023-24ನೇ ಸಾಲಿನಲ್ಲಿ ಪ್ರತಿಭಾವಂತ ಮಾಧ್ಯಮಿಕ/ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಾರ್ಷಿಕ 10,000 ರೂ. ಪ್ರೋತ್ಸಾಹಿತ ಕ್ರೀಡಾ ವಿದ್ಯಾರ್ಥಿವೇತನ ನೀಡಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ರಾಜ್ಯ ಸರ್ಕಾರದ ಕ್ರೀಡಾ ವಿದ್ಯಾರ್ಥಿ ವೇತನ ಯೋಜನೆಯಡಿ ಪ್ರತಿಭಾವಂತ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಮಾಧ್ಯಮಿಕ/ಪ್ರೌಢಶಾಲಾ ವಿದ್ಯಾರ್ಥಿ ಕ್ರೀಡಾಪಟು(6 ರಿಂದ 10ನೇ ತರಗತಿ) ಗಳಿಗೆ ವಾರ್ಷಿಕ 10,000 ರೂ. ಪ್ರೋತ್ಸಾಹಿತ ಕ್ರೀಡಾ ವಿದ್ಯಾರ್ಥಿ ವೇತನವನ್ನು ನೀಡುವ ಯೋಜನೆ ಇಲಾಖೆಯಲ್ಲಿ ಜಾರಿಯಲ್ಲಿದ್ದು, ಈ ಯೋಜನೆಯನ್ವಯ ಪ್ರಸ್ತುತ ಮಾಧ್ಯಮಿಕ ಅಥವಾ ಪ್ರೌಢಶಾಲೆಯಲ್ಲಿ ಓದುತ್ತಿರುವ ಕ್ರೀಡಾಪಟುಗಳಿಗೆ ವಿದ್ಯಾರ್ಥಿವೇತನ ನೀಡಲಾಗುವುದು.
ಆಯಾ ಜಿಲ್ಲೆಗಳ ಉಪ/ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರು 2023-24ನೇ ಸಾಲಿನ ವಿದ್ಯಾರ್ಥಿ ವೇತನಕ್ಕಾಗಿ ಅರ್ಹ ಕ್ರೀಡಾಪಟುಗಳಿಂದ ಕಛೇರಿಯ ಅಧಿಕೃತ https://sevasindhuservices.karnataka.gov.in ಆನ್‌ಲೈನ್‌ನಲ್ಲಿ ಜೂನ್ 30ರ ಒಳಗಾಗಿ ಅರ್ಜಿಗಳನ್ನು ಸಲ್ಲಿಸುವಂತೆ ಸೂಚಿಸಲಾಗಿದೆ.
ಷರತ್ತು/ನಿಯಮಗಳು;
ಅರ್ಜಿದಾರರು 2023-24ನೇ ಸಾಲಿನಲ್ಲಿ ವಿದ್ಯಾರ್ಥಿಯಾಗಿದ್ದು, ಮಾಧ್ಯಮಿಕ ಅಥವಾ ಪ್ರೌಢಶಾಲೆ (6 ರಿಂದ 10ನೇ ತರಗತಿ) ಯಲ್ಲಿ ಓದುತ್ತಿರಬೇಕು.
ಅರ್ಜಿದಾರರು ರಾಜ್ಯ ಕ್ರೀಡಾ ಪ್ರಾಧಿಕಾರದಲ್ಲಿ ನೊಂದಾಯಿತವಾದ ಕ್ರೀಡಾ ಸಂಸ್ಥೆಗಳು ದಿ: 01.04.2023 ರಿಂದ 31.03.2024 ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿರಬೇಕು ಅಥವಾ ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಅಧಿಕೃತ ಕ್ರೀಡಾ ಸಂಸ್ಥೆಗಳು ಆಯೋಜಿಸುವ ರಾಷ್ಟ್ರ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿರಬೇಕು. ಅಂದರೆ ದಿನಾಂಕ 01-04-2023 ರಿಂದ 31-03-2024 ರ ಅವಧಿಯಲ್ಲಿ ನಡೆದ ಕ್ರೀಡಾಕೂಟಿಗಳಲ್ಲಿನ ಸಾಧನೆಗಳನ್ನು ಮಾತ್ರ ಪರಿಗಣಿಸಲಾಗುವುದು.
ರಾಷ್ಟ್ರೀಯ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿ ಭಾಗವಹಿಸಿದ್ದಲ್ಲಿ ಅಂತಹ ಕ್ರೀಡಾಪಟುಗಳು ಅರ್ಜಿ ಸಲ್ಲಿಸಬಹುದಾಗಿದೆ.
ರಾಷ್ಟ್ರೀಯ ಶಾಲಾ ಕ್ರೀಡಾಕೂಟದಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿ ಭಾಗವಹಿಸಿದ್ದಲ್ಲಿ ಅಂತಹ ಕ್ರೀಡಾಪಟುಗಳು ಅರ್ಜಿ ಸಲ್ಲಿಸಬಹುದಾಗಿದೆ.
ಒಬ್ಬ ಕ್ರೀಡಾಪಟು ಒಂದಕ್ಕಿಂತ ಹೆಚ್ಚು ಕ್ರೀಡೆಗಳಲ್ಲಿ ಭಾಗವಹಿಸಿದ್ದರೂ ಸಹ ವಾರ್ಷಿಕ
ಒಂದೇ ವಿದ್ಯಾರ್ಥಿವೇತನದ ಮೊತ್ತಕ್ಕೆ ಮಾತ್ರ ಅರ್ಹರಿರುತ್ತಾರೆ.
ವಿದ್ಯಾರ್ಥಿ ವೇತನದ ಮೊತ್ತವನ್ನು ವಾರ್ಷಿಕ 10,000 ರೂ. ಮಾತ್ರ ಮಂಜೂರು ಮಾಡಲಾಗುವುದು.