ಬೆಂಗಳೂರು: ವಿಧಾನ ಪರಿಷತ್ ಸಚಿವಾಲಯದಲ್ಲಿ ಖಾಲಿ ಇರುವ ವಿವಿಧ ವೃಂದದ ಹುದ್ದೆಗಳ ನೇರ ನೇಮಕಾತಿಗೆ ಹೊರಡಿಸಿದ್ದ ಅಧಿಸೂಚನೆ ಹಿಂಪಡೆಯುವಂತೆ ಆರ್ಥಿಕ ಇಲಾಖೆ ಸೂಚನೆ ನೀಡಿದೆ.
ನೇಮಕಾತಿ ಪ್ರಸ್ತಾವ ಇನ್ನು ಪರಿಶೀಲನೆ ಹಂತದಲ್ಲಿರುವಾಗಲೇ ನೇಮಕಾತಿ ಅಧಿಸೂಚನೆ ಹೊರಡಿಸಿರುವುದು ಸರಿಯಲ್ಲ. ಹೀಗಾಗಿ ಕೂಡಲೇ ಎರಡು ಅಧಿಸೂಚನೆ ಹಿಂಪಡೆಯಬೇಕೆಂದು ಆರ್ಥಿಕ ಇಲಾಖೆ ಅಧೀನ ಕಾರ್ಯದರ್ಶಿ ಹೆಚ್.ಆರ್. ಲಲಿತಾ ಅವರು ಪತ್ರದ ಮೂಲಕ ವಿಧಾನ ಪರಿಷತ್ ಸಚಿವಾಲಯಕ್ಕೆ ಸೂಚನೆ ನೀಡಿದ್ದಾರೆ.
ಸಚಿವಾಲಯದ 28 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಮಾರ್ಚ್ 4 ಮತ್ತು 12 ರಂದು ಹೊರಡಿಸಿದ ಸುತ್ತೋಲೆಗಳನ್ನು ವಾಪಸ್ ಪಡೆಯಲು ಕಾರ್ಯದರ್ಶಿಗೆ ಆರ್ಥಿಕ ಇಲಾಖೆ ಸೂಚನೆ ನೀಡಿದೆ.
ಸಚಿವಾಲಯದಲ್ಲಿ ಖಾಲಿ ಇರುವ ಚಾಲಕರು, ಗ್ರೂಪ್ ಡಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ನಮೂದಿಸಿದ ಹುದ್ದೆಗಳ ತುಂಬಲು ಆರ್ಥಿಕ ಇಲಾಖೆ ಅನುಮತಿ ಕೋರಲಾಗಿದೆ. ಪ್ರಸ್ತಾವನೆ ಇನ್ನು ಪರಿಶೀಲನೆಯಲ್ಲಿದ್ದು, ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಇದುವರೆಗೂ ಸಮ್ಮತಿ ನೀಡಿಲ್ಲ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸುತ್ತೋಲೆಯಲ್ಲಿ ವಾಹನ ಚಾಲಕರು ಮತ್ತು ಗ್ರೂಪ್ ಡಿ ವೃಂದದಲ್ಲಿ ಖಾಲಿ ಇರುವ ಹುದ್ದೆಗಳನ್ನು, ಇನ್ನು ಮುಂದೆ ಖಾಲಿಯಾಗುವ ಹುದ್ದೆಗಳನ್ನು ಬಾಹ್ಯ ಮೂಲಗಳ ಮೂಲಕ ಪಡೆಯಬೇಕೆಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಯಾವುದೇ ಹುದ್ದೆ ಭರ್ತಿ ಮಾಡಬೇಕಾದಲ್ಲಿ ಆರ್ಥಿಕ ಇಲಾಖೆಯ ಸಹಮ ಕಡ್ಡಾಯವಾಗಿರುತ್ತದೆ. ಹಾಗಾಗಿ ನೇಮಕಾತಿ ಸಂಬಂಧ ಹೊರಡಿಸಿದ ಅಧಿಸೂಚನೆ ವಾಪಸ್ ಪಡೆಯಲು ತಿಳಿಸಲಾಗಿದೆ.