ಬೆಂಗಳೂರು: 2017 -18ರ ಪೂರ್ವದಲ್ಲಿ ಪ್ರಾರಂಭವಾದ ಹಳೆಯ ಖಾಸಗಿ ಶಾಲೆಗಳಿಗೆ ಇಲಾಖೆಯ ಮಾನದಂಡ, ಷರತ್ತುಗಳನ್ನು ಪೂರೈಸುವುದಾಗಿ ಮುಚ್ಚಳಿಕೆ ಪತ್ರ ನೀಡಿ ಪ್ರಸಕ್ತ ಸಾಲಿನ ಮಾನ್ಯತೆ ನವೀಕರಣ ಪಡೆಯಲು ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮತ್ತು ಅವಕಾಶ ಕಲ್ಪಿಸಿದೆ.
ಸುಪ್ರೀಂ ಕೋರ್ಟ್ ಆದೇಶದ ಅನುಸಾರ ಖಾಸಗಿ ಶಾಲೆಗಳು ತಮ್ಮ ಶಾಲಾ ಜಾಗವನ್ನು ಶೈಕ್ಷಣಿಕ ಉದ್ದೇಶಕ್ಕೆ ಭೂಪರಿವರ್ತನೆ ಮಾಡಿಸುವುದು, ಕಟ್ಟಡ ಸುರಕ್ಷತೆ, ಅಗ್ನಿ ಸುರಕ್ಷತೆ, ಕಟ್ಟಡ ನಕ್ಷೆ ಸೇರಿ ಇನ್ನಿತರ ಮಾನದಂಡಗಳಿಗೆ ಸಂಬಂಧಿಸಿದಂತೆ ಇಲಾಖೆಗಳಿಂದ ಪ್ರಮಾಣ ಪತ್ರ ಪಡೆದು ಅರ್ಜಿ ಸಲ್ಲಿಸಬೇಕು.
ಈ ಮಾನದಂಡಗಳನ್ನು ಪೂರೈಸಲು ಹಳೆಯ ಶಾಲೆಗಳು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ಎಲ್ಲಾ ಷರತ್ತು, ಮಾನದಂಡಗಳನ್ನು ಪೂರೈಸುವುದಾಗಿ 100 ರೂಪಾಯಿ ಛಾಪಾ ಕಾಗದ ಮೇಲೆ ಮುಚ್ಚಳಿಕೆ ಪತ್ರವನ್ನು ಆಡಳಿತ ಮಂಡಳಿಗಳು ದೃಢೀಕರಿಸಿ ಆನ್ಲೈನ್ ನಲ್ಲಿ ಮಾನ್ಯತೆ ನವೀಕರಣಕ್ಕೆ ಅರ್ಜಿ ಸಲ್ಲಿಸಬೇಕು. ಅಂತಹ ಶಾಲೆಗಳಿಗೆ ಮಾತ್ರ 2024 -25 ನೇ ಸಾಲಿಗೆ ಮಾತ್ರ ಅನ್ವಯಿಸುವಂತೆ ಮಾನ್ಯತೆ ನವೀಕರಣಕ್ಕೆ ಕ್ರಮ ಕೈಗೊಳ್ಳಲು ಎಲ್ಲ ಜಿಲ್ಲಾ ನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಇಲಾಖೆಯ ಆಯುಕ್ತರು ಸೂಚಿಸಿದ್ದಾರೆ. ಈ ಸುತ್ತೋಲೆಗೆ ಖಾಸಗಿ ಶಾಲಾ ಸಂಘಟನೆಗಳಿಂದ ಆಕ್ಷೇಪ ವ್ಯಕ್ತವಾಗಿದೆ.