ವಿನಾಕಾರಣ ಸಂಗಾತಿಗೆ ಲೈಂಗಿಕತೆಯನ್ನು ನಿರಾಕರಿಸುವುದು ಮಾನಸಿಕ ಕ್ರೌರ್ಯಕ್ಕೆ ಸಮ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.
ಕೌಟುಂಬಿಕ ನ್ಯಾಯಾಲಯವು ತನ್ನ ವಿಚ್ಛೇದನದ ಅರ್ಜಿಯನ್ನು ವಜಾಗೊಳಿಸಿದ್ದನ್ನು ವಿರೋಧಿಸಿ ವ್ಯಕ್ತಿಯೊಬ್ಬರು ಸಲ್ಲಿಸಿದ ಮೇಲ್ಮನವಿಯನ್ನು ಆಲಿಸಿದ ಅಲಹಾಬಾದ್ ಹೈಕೋರ್ಟ್, ಸಾಕಷ್ಟು ಕಾರಣವಿಲ್ಲದೆ ಸಂಗಾತಿಗೆ ದೀರ್ಘಕಾಲದವರೆಗೆ ಲೈಂಗಿಕತೆಯನ್ನು ನಿರಾಕರಿಸುವುದು ಮಾನಸಿಕ ಕ್ರೌರ್ಯಕ್ಕೆ ಸಮಾನವಾಗಿದೆ ಎಂದು ತಿಳಿಸಿದೆ.
ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಕಕ್ಷಿದಾರರು ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ವೈವಾಹಿಕ ಬಾಧ್ಯತೆಯ ಹೊಣೆಗಾರಿಕೆಯನ್ನು ನಿಭಾಯಿಸಲು ಪತ್ನಿ ನಿರಾಕರಿಸಿದ್ದಾರೆ ಎಂಬುದು ದಾಖಲೆಯಿಂದ ಸ್ಪಷ್ಟವಾಗಿದೆ ಎಂದು ಹೈಕೋರ್ಟ್ ಹೇಳಿದೆ.
ಅರ್ಜಿದಾರರ ಪ್ರಕಾರ, ಅವರ ಪತ್ನಿ ವೈವಾಹಿಕ ಜೀವನದ ಜವಾಬ್ದಾರಿ ಪೂರೈಸಲು ನಿರಾಕರಿಸಿ ನಂತರ ಅವರು ತನ್ನ ಪೋಷಕರ ಮನೆಗೆ ತೆರಳಿದರು. ಆಕೆಯ ಮನವೊಲಿಸಲು ಹಲವು ಪ್ರಯತ್ನಗಳನ್ನು ಮಾಡಿದ್ದೇನೆ ಎಂದು ಪತಿ ಹೇಳಿಕೊಂಡಿದ್ದಾನೆ. ಆದರೆ ಮಹಿಳೆ ಪತಿಯೊಂದಿಗೆ ಯಾವುದೇ ದೈಹಿಕ ಸಂಬಂಧವನ್ನು ಸ್ಥಾಪಿಸಿಲ್ಲ. ಜುಲೈ 1994 ರಲ್ಲಿ, ವ್ಯಕ್ತಿ ತನ್ನ ಹೆಂಡತಿಗೆ 22,000 ರೂ. ಜೀವನಾಂಶವನ್ನು ಪಾವತಿಸಿದ ನಂತರ ಪಂಚಾಯತ್ ಮುಂದೆ ದಂಪತಿಗಳು ಪರಸ್ಪರ ವಿಚ್ಛೇದನ ಪಡೆದರು. ನಂತರ ಆಕೆ ಬೇರೊಬ್ಬ ವ್ಯಕ್ತಿಯನ್ನು ಮದುವೆಯಾದಳು.
ನಂತರ ಪತಿ ಮಾನಸಿಕ ಕ್ರೌರ್ಯ ಮತ್ತು ತೊರೆದುಹೋದ ಆಧಾರದ ಮೇಲೆ ವಿಚ್ಛೇದನ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ, ವಿಚಾರಣಾ ನ್ಯಾಯಾಲಯವು ಕ್ರೌರ್ಯದ ಆಧಾರದ ಮೇಲೆ ವಿಚ್ಛೇದನ ನೀಡಲು ನಿರಾಕರಿಸಿತು. ತನ್ನ ವಿಚ್ಛೇದನ ಅರ್ಜಿಯನ್ನು ವಜಾಗೊಳಿಸಿದ ಕೌಟುಂಬಿಕ ನ್ಯಾಯಾಲಯದ ಆದೇಶದ ವಿರುದ್ಧ ನೊಂದ ಅವರು ಅಲಹಾಬಾದ್ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದರು.
ನ್ಯಾಯಮೂರ್ತಿಗಳಾದ ಸುನೀತ್ ಕುಮಾರ್ ಮತ್ತು ರಾಜೇಂದ್ರ ಕುಮಾರ್ ಅವರ ಪೀಠವು ಗುರುವಾರ ಪತಿಗೆ ವಿಚ್ಛೇದನದ ತೀರ್ಪು ನೀಡುವಾಗ, ಸಾಕಷ್ಟು ಕಾರಣವಿಲ್ಲದೆ ಸಂಗಾತಿಯೊಂದಿಗೆ ದೀರ್ಘಕಾಲದವರೆಗೆ ಲೈಂಗಿಕ ಕ್ರಿಯೆಗೆ ಅವಕಾಶ ನೀಡದಿರುವುದು ನಿಸ್ಸಂದೇಹವಾಗಿ, ಇದು ಮಾನಸಿಕ ಕ್ರೌರ್ಯಕ್ಕೆ ಸಮಾನವಾಗಿದೆ ಎಂದು ತಿಳಿಸಿದೆ.