ಬೆಂಗಳೂರು: ಬೆಳ್ಳಂದೂರು ಡಿನೋಟಿಫಿಕೇಷನ್ ಪ್ರಕರಣದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮತ್ತೆ ಸಂಕಷ್ಟ ಎದುರಾಗಿದೆ.
ಬೆಳ್ಳಂದೂರು ಡಿನೋಟಿಫಿಕೇಶನ್ ಪ್ರಕರಣದ ಸಂಬಂಧ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಬಿ ರಿಪೋರ್ಟ್ ತಿರಸ್ಕರಿಸಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಮರು ತನಿಖೆಗೆ ಆದೇಶಿಸಿದೆ.
ವಾಸುದೇವರೆಡ್ಡಿ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಆಲಿಸಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನ್ಯಾಯಾಧೀಶ ಶ್ರೀಧರ್ ಗೋಪಾಲಕೃಷ್ಣ ಭಟ್ ಅವರು ತನಿಖೆಗೆ ಆದೇಶ ನೀಡಿದ್ದಾರೆ. ಹೈಕೋರ್ಟ್ ಏಕಸದಸ್ಯ ಪೀಠ ವ್ಯಕ್ತಪಡಿಸಿರುವ ಅಭಿಪ್ರಾಯವನ್ನು ಗಮನದಲ್ಲಿಟ್ಟುಕೊಂಡು ಮರು ತನಿಖೆ ನಡೆಸಲು ಸೂಚಿಸಲಾಗಿದೆ.
ಹೈಕೋರ್ಟ್ ಏಕಸದಸ್ಯ ಪೀಠ ಯಡಿಯೂರಪ್ಪ 2006 ರಲ್ಲಿ ಡಿಸಿಎಂ ಆಗಿದ್ದಾಗ ಕಾನೂನಿನ ಪ್ರಕಾರ ಡಿನೋಟಿಫಿಕೇಷನ್ ಮಾಡಿದ್ದಾರೆಂದು ಹೇಳಲಾಗುವುದಿಲ್ಲ. 2015 ರಲ್ಲಿ ಎಫ್ಐಆರ್ ದಾಖಲಾಗಿದ್ದರೂ, 2020 ರವರೆಗೂ ತನಿಖೆ ಪೂರ್ಣಗೊಳಿಸಿಲ್ಲ. ಉದ್ದೇಶ ಪೂರ್ವಕವಾಗಿ ವಿಳಂಬ ಮಾಡಿದಂತಿದೆ ಎಂದು ಹೇಳಿತ್ತು.