ಉತ್ತರ ಪ್ರದೇಶ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನಿರಾಕರಿಸಿದ ನಂತರ ಸಮಾಜವಾದಿ ಪಕ್ಷದ ಕಾರ್ಯಕರ್ತರೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಭಾನುವಾರ ಲಕ್ನೋದ ಸಮಾಜವಾದಿ ಪಕ್ಷದ ಮುಖ್ಯ ಕಚೇರಿಯ ಹೊರ ಭಾಗದಲ್ಲಿ ಈ ಘಟನೆ ನಡೆದಿದೆ.
ಅಲಿಗಢದ ಕ್ಷೇತ್ರದ ಸಮಾಜವಾದಿ ಪಕ್ಷದ ಕಾರ್ಯಕರ್ತರಾಗಿರುವ ಆದಿತ್ಯ ಠಾಕೂರ್ ಅವರು ಲಕ್ನೋದಲ್ಲಿರುವ ಸಮಾಜವಾದಿ ಪಕ್ಷದ ಪ್ರಧಾನ ಕಚೇರಿಯ ಮುಂದೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದರು. ಘಟನಾ ಸ್ಥಳದಲ್ಲಿದ್ದವರು ಹಾಗೂ ಪೊಲೀಸ್ ಅಧಿಕಾರಿಗಳು ಸರಿಯಾದ ಸಮಯಕ್ಕೆ ಬಂದು ಅವರನ್ನು ತಡೆದರು. ನಂತರ ಪೊಲೀಸರು ಅವರನ್ನ ಬಂಧಿಸಿದ್ದಾರೆ.
ಟಿಕೆಟ್ ಕೈ ತಪ್ಪಿರುವುದರಿಂದ ದುಃಖದಲ್ಲಿರುವ ಆದಿತ್ಯ ಠಾಕೂರ್, ನಾನು ಇಲ್ಲೇ ನನ್ನ ಪ್ರಾಣ ಕಳೆದುಕೊಳ್ಳುತ್ತೇನೆ, ಏನಾದರೂ ಆಗಲಿ. ನೀವು ನನ್ನನ್ನು ಜೈಲಿಗೆ ತಳ್ಳಿದರೂ, ನನ್ನನ್ನು ತಡೆಯಲು ಸಾಧ್ಯವಿಲ್ಲ. ನನಗೆ ನ್ಯಾಯ ಬೇಕು ಎಂದು ಹೇಳಿದ್ದಾರೆ. ಅಲ್ಲದೇ ನನಗೆ ಸೇರಬೇಕಾದ ಟಿಕೆಟ್ ಅನ್ನು ಪಕ್ಷವು ದೋಚಿಕೊಂಡು, ಹೊರಗಿನವರಿಗೆ ನೀಡಿದೆ ಎಂದು ಆರೋಪಿಸಿದ್ದಾರೆ. ಆದಿತ್ಯ ಠಾಕೂರ್ ಅವರು ಅಲಿಗಢದ ಛಾರಾ ಕ್ಷೇತ್ರದಿಂದ ಯುಪಿ ಚುನಾವಣೆಯಲ್ಲಿ ಸ್ಪರ್ಧಿಸಲು ಆಶಿಸಿದ್ದರು ಆದರೆ ಸಮಾಜವಾದಿ ಪಕ್ಷದಿಂದ ಟಿಕೆಟ್ ದೊರೆತಿಲ್ಲ ಎಂದು ತಿಳಿದು ಬಂದಿದೆ.
ಸಮಾಜವಾದಿ ಪಕ್ಷ-ರಾಷ್ಟ್ರೀಯ ಲೋಕದಳ ಮೈತ್ರಿಕೂಟವು ಜನವರಿ 13 ರಂದು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಮೊದಲ ಹಂತದ 29 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದೆ. 29 ಸ್ಥಾನಗಳ ಪೈಕಿ SP 10 ಮತ್ತು RLD 19 ರಂದು ಅಭ್ಯರ್ಥಿಗಳನ್ನು ಘೋಷಿಸಿದೆ. ಘೋಷಣೆಯಾಗಿರುವ ಕ್ಷೇತ್ರಗಳು ಮುಜಾಫರ್‌ನಗರ, ಶಾಮ್ಲಿ, ಅಲಿಗಢ, ಆಗ್ರಾ, ಘಾಜಿಯಾಬಾದ್, ಮೀರತ್, ಹಾಪುರ್, ಜಿಲ್ಲೆಗಳಲ್ಲಿದ್ದು, ಈ ಕ್ಷೇತ್ರಗಳಲ್ಲಿ 2017 ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳೇ ಹೆಚ್ಚಾಗಿ ಗೆದ್ದಿದ್ದಾರೆ. ಇನ್ನು ಶನಿವಾರ ಮಿತ್ರಪಕ್ಷಗಳು ಏಳು ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅವರೆಲ್ಲರೂ ಜಯಂತ್ ಚೌಧರಿ ನೇತೃತ್ವದ ಆರ್‌ಎಲ್‌ಡಿ ಸದಸ್ಯರಾಗಿದ್ದಾರೆ.