ಕಂಠಮಟ್ಟ ಕುಡಿದು ಸಸ್ಯಹಾರಿ ಹೋಟೆಲ್ ಒಂದಕ್ಕೆ ಊಟಕ್ಕೆ ತೆರಳಿದ ಇಬ್ಬರು ಪೊಲೀಸ್ ಪೇದೆಗಳು ತಮಗೆ ಚಿಕನ್ ಬಡಿಸಬೇಕೆಂಬ ಬೇಡಿಕೆ ಇಟ್ಟಿದ್ದು, ಇದಕ್ಕೆ ಹೋಟೆಲ್ ಸಿಬ್ಬಂದಿ ನಿರಾಕರಿಸಿದ ವೇಳೆ ದಾಂಧಲೆ ನಡೆಸಿದ್ದಾರೆ. ಇಂತಹದೊಂದು ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ.
ಚೆನ್ನೈ ಹೊರ ವಲಯದ ತಾಂಬರಂ ಪ್ರದೇಶದಲ್ಲಿದ್ದ ಸಸ್ಯಾಹಾರಿ ಹೋಟೆಲ್ ಗೆ ಮೀಸಲು ಪೊಲೀಸ್ ಪಡೆಯ ಇಬ್ಬರು ಪೇದೆಗಳು ಗುರುವಾರ ರಾತ್ರಿ ಊಟಕ್ಕೆ ತೆರಳಿದ್ದಾರೆ. ಚಿಕನ್ ನೀಡುವಂತೆ ಅವರುಗಳು ಕೇಳಿದಾಗ ಇದು ವೆಜ್ ಹೋಟೆಲ್ ಎಂದು ಸಿಬ್ಬಂದಿ ಉತ್ತರಿಸಿದ್ದಾರೆ.
ಆಗ ಅವರುಗಳು ಕಡೆ ಪಕ್ಷ ತಮಗೆ ಎಗ್ ರೈಸ್ ನೀಡಿ. ಮೊಟ್ಟೆ ಸಸ್ಯಹಾರಿ ಎಂದು ವಾದಕ್ಕೆ ಇಳಿದಿದ್ದಾರೆ. ಆಗ ಸಿಬ್ಬಂದಿ ಹಾಗೂ ಪೇದೆಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ಅಂತಿಮವಾಗಿ ಸ್ಥಳೀಯ ಪೊಲೀಸ್ ಠಾಣೆಗೆ ಹೋಟೆಲ್ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಸ್ಥಳೀಯ ಪೊಲೀಸರು ಕುಡಿದ ಮತ್ತಿನಲ್ಲಿದ್ದ ಪೇದೆಗಳನ್ನು ಠಾಣೆಗೆ ಕರೆದೊಯ್ದಿದ್ದು, ಹೋಟೆಲ್ ನಲ್ಲಿ ದಾಂಧಲೆ ನಡೆಸುತ್ತಿರುವ ಪೇದೆಗಳ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದೀಗ ಹಿರಿಯ ಪೊಲೀಸ್ ಅಧಿಕಾರಿಗಳು ಇಬ್ಬರು ಪೇದೆಗಳ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ.