ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯಲ್ಲಿ ಡೆಂಘಿ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಆಯಾ ವಲಯಗಳಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ವಲಯ ಆಯುಕ್ತರು ಡೆಂಘಿ ನಿಯಂತ್ರಿಸುವ ಸಂಬಂಧ ಆರೋಗ್ಯ ವಿಭಾಗದ ಅಧಿಕಾರಿಗಳ ಜೊತೆ ಪ್ರತಿನಿತ್ಯ ಸಭೆ ನಡೆಸಿ ಮೇಲ್ವಿಚಾರಣೆ ಮಾಡಬೇಕು. ಆಯಾ ವಲಯ ವ್ಯಾಪ್ತಿಯಲ್ಲಿ ಹೆಚ್ಚು ಡೆಂಘಿ ಪ್ರಕರಣಗಳು ಕಂಡುಬರುವ ಹಾಟ್ ಸ್ಪಾಟ್ ಸ್ಥಳಗಳಲ್ಲಿ ನಾಗರಿಕರಿಗೆ ಸೊಳ್ಳೆ ಕಚ್ಚದಂತೆ ಡೀಟ್ ಕ್ರೀಮ್ ಹಾಗೂ ನೀಮ್ ಆಯಿಲ್ ವಿತರಿಸಬೇಕು. ಜೊತೆಗೆ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಪಡಿಸಲು ಹೆಚ್ಚಾಗಿ ಫಾಂಗಿಂಗ್ ಹಾಗೂ ಔಷಧಿ ಸಿಂಪಡಣೆ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.