ಬೆಂಗಳೂರು : ರಾಜ್ಯದಲ್ಲಿ ಡೆಂಗ್ಯೂ ಹಾವಳಿ ಮಿತಿ ಮೀರಿದ್ದು, 10 ದಿನಗಳಲ್ಲಿ 1,026 ಪ್ರಕರಣ ಪತ್ತೆಯಾಗಿದೆ.
ಕಳೆದ 10 ದಿನಗಳಲ್ಲಿ ಬರೋಬ್ಬರಿ 1,026 ಡೆಂಗ್ಯೂ, 137 ಚಿಕೂನ್ ಗುನ್ಯಾ ಪಾಸಿಟಿವ್ ಬಂದಿದ್ದು ಆತಂಕ ಮೂಡಿಸಿದೆ. ರಾಜ್ಯದಲ್ಲಿ ಪ್ರಸಕ್ತ ವರ್ಷ 4,414 ಡೆಂಗ್ಯೂ, 778 ಚಿಕುನ್ಗುನ್ಯಾ ಪ್ರಕರಣಗಳು ಪತ್ತೆ ಆಗಿವೆ. ಮುಂಗಾರು ಮಳೆಯ ಆರ್ಭಟದ ಜೊತೆಗೆ ಚಿಕನ್ ಗುನ್ಯಾ, ಡೆಂಗ್ಯೂ ಸೇರಿದಂತೆ ಹಲವು ಖಾಯಿಲೆಗಳು ಜನರನ್ನು ಕಾಡುತ್ತಿದೆ. ಆಸ್ಪತ್ರೆಗಳಿಗೆ ದಾಖಲಾಗುವ ರೋಗಿಗಳ ಸಂಖ್ಯೆ ಕೂಡ ಹೆಚ್ಚಳವಾಗುತ್ತಿದೆ.
ಭಯ ಬೇಡ ಇರಲಿ ಈ ಎಚ್ಚರ
ಡೆಂಗ್ಯು, ಚಿಕೂನ್ ಗುನ್ಯಾ ರೋಗ ನಿಯಂತ್ರಣಕ್ಕಾಗಿ, ಬಳಕೆಗೆ ನೀರು ತುಂಬುವ ಪರಿಕರಗಳಿಗೆ ಸರಿಯಾಗಿ ಮುಚ್ಚಳ ಮುಚ್ಚುವ ಮೂಲಕ ಸಾರ್ವಜನಿಕರು ಸೊಳ್ಳೆ ಉತ್ಪತ್ತಿಯಾಗದಂತೆ ನಿಗಾವಹಿಸಬೇಕು ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಮನೆಗೆ ಬಳಸಲು ನೀರು ಅತ್ಯಗತ್ಯವಾಗಿದ್ದು, ನೀರು ತುಂಬುವ ಪರಿಕರಗಳಾದ ಡ್ರಮ್, ಬ್ಯಾರಲ್, ಸಿಮೆಂಟ್ ತೊಟ್ಟಿ, ಮಣ್ಣಿನ ಮಡಿಕೆಗಳಿಗೆ ನೀರು ತುಂಬಿದ ನಂತರ ಸರಿಯಾಗಿ ಮುಚ್ಚಳ ಮುಚ್ಚುವ ಮೂಲಕ ಸೊಳ್ಳೆಗಳು ಮೊಟ್ಟಯಿಡಲು ನೀರು ಸಿಗದಂತೆ ಜಾಗ್ರತೆ ವಹಿಸಬೇಕು .
ಸೊಳ್ಳೆಗಳ ಕಚ್ಚುವಿಕೆಯಿಂದ ಹರಡುವ ಡೆಂಗ್ಯು, ಚಿಕನ್ಗುನ್ಯಾ ಸೇರಿದಂತೆ ಮಲೇರಿಯಾ, ಆನೆಕಾಲು ಮುಂತಾದ ರೋಗಗಳ ನಿಯಂತ್ರಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.ಮುಂಜಾಗ್ರತಾ ಕ್ರಮವಾಗಿ ಮನೆ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡಬೇಕು, ನೀರು ನಿಲ್ಲುವ ತಾಣಗಳನ್ನು ಮಣ್ಣು ಹಾಕಿ ಮುಚ್ಚಬೇಕು, ನೀರು ನಿಲ್ಲುವ ಟೈರ್, ಟಿನ್, ಪ್ಲಾಸ್ಟಿಕ್ ಕಫ್ಗಳನ್ನು ಸೂಕ್ತ ವಿಲೇವಾರಿ ಮಾಡಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ.