
ಬೆಂಗಳೂರು: ಶಂಕಿತ ಡೆಂಘೀ ಜ್ವರಕ್ಕೆ ಬಾಲಕಿ ಸೇರಿ ಇಬ್ಬರು ಸಾವನ್ನಪ್ಪಿದ್ದಾರೆ. ಹಾಸನದಲ್ಲಿ 58 ವರ್ಷದ ವ್ಯಕ್ತಿ, ಕೊಪ್ಪಳದಲ್ಲಿ 6ನೇ ತರಗತಿ ವಿದ್ಯಾರ್ಥಿನಿ ಡೆಂಘೀ ಜ್ವರಕ್ಕೆ ಬಲಿಯಾಗಿದ್ದಾರೆ.
ಹಾಸನ ಜಿಲ್ಲೆ ಹೊಳೆನರಸೀಪುರದ ನಿವಾಸಿ ಕಾಂಗ್ರೆಸ್ ಮುಖಂಡ ಸೈಯದ್ ಅನ್ವರ್ ಹುಸೇನ್ ಬುಧವಾರ ರಾತ್ರಿ ಮೃತಪಟ್ಟಿದ್ದಾರೆ. ಕಳೆದ ಸೋಮವಾರ ಜ್ವರ ಹೆಚ್ಚಾದ ಕಾರಣ ಅವರನ್ನು ಹಾಸನದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ರಾತ್ರಿ ಮೃತಪಟ್ಟಿದ್ದಾರೆ. ಮೃತರು ಪತ್ನಿ, ನಾಲ್ವರು ಪುತ್ರಿಯರು, ಪುತ್ರನನ್ನು ಅಗಲಿದ್ದಾರೆ. ಗುರುವಾರ ಮಧ್ಯಾಹ್ನ ಅಂತ್ಯಕ್ರಿಯೆ ನೆರವೇರಿದೆ.
ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ಸಿದ್ದಾಪುರದಲ್ಲಿ ಶಂಕಿತ ಡೆಂಘೀ ಜ್ವರಕ್ಕೆ 6ನೇ ತರಗತಿ ವಿದ್ಯಾರ್ಥಿನಿ ಸುಫಿಯಾ ಗುರುವಾರ ಮೃತಪಟ್ಟಿದ್ದಾಳೆ. ಜ್ವರದಿಂದ ಬಳಲುತ್ತಿದ್ದ ಬಾಲಕಿಯನ್ನು ಸಿಂಧನೂರು ಆಸ್ಪತ್ರೆಗೆ ದಾಖಲಿಸಿ ಕೊಡಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ.