ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಡೆಂಗ್ಯೂ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಆರೋಗ್ಯ ಇಲಾಖೆ ಅಧಿಕಾರಿಗಳು ಜಿಲ್ಲೆಯಾದ್ಯಂತ ಮುಂಜಾಗೃತಾ ಕ್ರಮ ಕೈಗೊಂಡಿದ್ದಾರೆ.
ಜಿಲ್ಲೆಯಲ್ಲಿ ಈಗಾಗಲೇ 50 ಡೆಂಗ್ಯೂ ಪಾಸಿಟೀವ್ ಕೇಸ್ ಪತ್ತೆಯಾಗಿದ್ದು, ಚಾಮರಾಜನಗರ ತಾಲೂಕು ಒಂದರಲ್ಲಿಯೇ 34 ಪ್ರಕರಣಗಳು ಪತ್ತೆಯಾಗಿವೆ. ಈಡಿಸ್ ಸೊಳ್ಳೆಗಳು ಮೊಟ್ಟೆ ಇಡದಂತೆ ಸ್ವಚ್ಛತೆ ಬಗ್ಗೆ ಗಮನ ಹರಿಸುವಂತೆ ಮುನ್ನೆಚ್ಚರಿಕೆ ನೀಡಲಾಗಿದೆ.
ನಿಂತ ನೀರಿನಲ್ಲಿ ಲಾರ್ವಾ ಪತ್ತೆ ಹಚ್ಚಿ ನಾಶಪಡಿಸುವಂತೆ ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಕಟ್ಟು ನಿಟ್ಟಿನ ಆದೇಶ ಹೊರಡಿಸಲಾಗಿದೆ. ಕೇರಳದಿಂದ ಬರುವವರ ಮೇಲೆ ಹೆಚ್ಚಿನ ನಿಗಾ ವಹಿಸುವಂತೆ ಜಿಲ್ಲಾಡಳಿತ ಸೂಚಿಸಿದೆ. ಗಡಿ ಭಾಗದ 150 ಹಳ್ಳಿಗಳಲ್ಲಿ ಪ್ರತಿದಿನ ಮನೆ ಮನೆ ಸಮೀಕ್ಷೆ ನಡೆಸಬೇಕು ಎಂದು ಆರೋಗ್ಯ ಸಿಬ್ಬಂದಿಗಳಿಗೆ ತಿಳಿಸಲಾಗಿದೆ. ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಪ್ರತ್ಯೇಕ ಐಸೋಲೇಷನ್ ವಾರ್ಡ್ ತೆರೆಯಲಾಗಿದೆ.
ಕಳೆದ ಒಂದು ತಿಂಗಳಲ್ಲಿ ಚಾಮರಾಜನಗರದಲ್ಲಿ 50 ಜನರಲ್ಲಿ ಡೆಂಗ್ಯೂ ಪಾಸಿಟಿವ್ ಪತ್ತೆಯಾಗಿದೆ. ಜ್ವರ, ವೈರಲ್ ಫೀವರ್ ಪ್ರಕರಣಗಳು ಹೆಚ್ಚುತ್ತಿದ್ದು, ಆಸ್ಪತ್ರೆಗೆ ದಾಖಲಾಗುತ್ತಿರುವ ಶೇ15ರಿಂದ 20 ಜನರಲ್ಲಿ ವೈರಲ್ ಫೀವರ್ ಪ್ರಕರಣ ಕಂಡುಬರುತ್ತಿದೆ.