ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿವೆ. ಡೆಂಗ್ಯೂ ಬಗ್ಗೆ ತಕ್ಷಣ ಎಚ್ಚರವಹಿಸಬೇಕಿದ್ದ ಆರೋಗ್ಯ ಇಲಾಖೆ ಸಿದ್ದರಾಮಯ್ಯ ಅವರನ್ನೂ ಮೀರಿಸುವಂತೆ ನಿದ್ದೆಗೆ ಶರಣಾಗಿದ್ದೇ ಡೆಂಗ್ಯೂ ರಾಜ್ಯದೆಲ್ಲೆಡೆ ಹಬ್ಬಲು ಪ್ರಮುಖ ಕಾರಣ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
ಜವಾಬ್ದಾರಿಯುಳ್ಳ ಮಗನಿದ್ದರೆ ಮನೆ ಚೆನ್ನಾಗಿರುತ್ತದೆ ಎಂಬ ಮಾತಿದೆ, ಆದರೆ ವಿಪರ್ಯಾಸವೆಂದರೆ ಕರ್ನಾಟಕದ ಘನತೆತೆತ್ತ ಸರ್ಕಾರದಲ್ಲಿ ಬಹುತೇಕ ಸಚಿವರೆಲ್ಲರೂ ಬೇಜವಾಬ್ದಾರಿಗಳು!! ಅದರಲ್ಲಿಯೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೊಣೆ ಹೊತ್ತ ಸಚಿವ ದಿನೇಶ್ ಗುಂಡೂರಾವ್ ಅವರು, ಅದ್ಯಾವ ದೇಶದಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಎಂಬುದು ತಿಳಿಯದು.
ಡೆಂಗ್ಯೂ ಮಹಾಮಾರಿ ಕನ್ನಡಿಗರನ್ನು ಈ ಪರಿ ಕಾಡುತ್ತಿದ್ದರೂ ಆರೋಗ್ಯ ಸಚಿವರು ಟ್ವೀಟ್ ಹೊರತುಪಡಿಸಿ ಮತ್ತಿನ್ನೇನನ್ನೂ ಮಾಡದಿರುವುದು ಸಚಿವರ ಬೇಜವಾಬ್ದಾರಿತನದ ಸುಸ್ಪಷ್ಟ ನಿದರ್ಶನ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಕಾಂಗ್ರೆಸ್ ಸರ್ಕಾರ ಕರ್ನಾಟಕಕ್ಕೆ ವಕ್ಕರಿಸಿದ ದಿನದಿಂದ ಇಲ್ಲಿಯವರೆಗೂ ಕಲುಷಿತ ನೀರು ಸೇವಿಸಿ ಅಸುನೀಗಿದ ಹಾಗೂ ಅಸ್ವಸ್ಥಗೊಂಡವರ ಸಂಖ್ಯೆ ದಿನೇ ದಿನೇ ಏರುತ್ತಿದೆ. ಕನ್ನಡಿಗರಿಗೆ ಶುದ್ಧ ಕುಡಿಯುವ ನೀರನ್ನೂ ಸಹ ನೀಡಲಾಗದ ಅಯೋಗ್ಯ ಸರ್ಕಾರ ಎಂಬ ಕುಖ್ಯಾತಿ ಕಾಂಗ್ರೆಸ್‌ನದ್ದು. ಕನ್ನಡಿಗರ ಆರೋಗ್ಯದ ಬಗ್ಗೆ ಕಾಂಗ್ರೆಸ್‌ಗೆ ಅದ್ಯಾವ ಪರಿ ಕಾಳಜಿ ಇದೆ ಎಂಬುದಕ್ಕೆ ಈ ಮೇಲಿನ ಘಟನೆಗಳೇ ಸಾಕ್ಷಿ.
ಈ ಹಿಂದಿನ ಸರ್ಕಾರ ಅಂಗನವಾಡಿ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಿ ಮಕ್ಕಳ ಸರ್ವತೋಮುಖ ಹಾಗೂ ಸದೃಢ ಬೆಳವಣಿಗೆಗೆ ಕಾರಣವಾಗಿತ್ತು. ಆದರೆ ಈಗಿನ ಕಾಂಗ್ರೆಸ್ ಸರ್ಕಾರ ಅಂಗನವಾಡಿ ಮಕ್ಕಳಿಗೆ ಕೊಳೆತ ಮೊಟ್ಟೆಯನ್ನು ವಿತರಿಸುವ ಮೂಲಕ ತಾನೆಷ್ಟು ದುಷ್ಟ ಎಂಬುದನ್ನು ನಿರೂಪಿಸಿತ್ತು. ಈಗ ಅದು ಸಾಲದೆಂಬಂತೆ ಹುಳು ಹಿಡಿದಿರುವ ಗೋಧಿ ರವೆಯನ್ನು ನೀಡಿ ಅದರಲ್ಲಿ ಉಪ್ಪಿಟ್ಟು ಮಾಡಿಕೊಳ್ಳಿ ಎನ್ನುತ್ತಿದೆ. ಇಂತಹ ಭಂಡ ಸರ್ಕಾರವನ್ನು ಕರ್ನಾಟಕದ ಇತಿಹಾಸದಲ್ಲಿ ಹಿಂದೆಂದೂ ನೋಡಿರಲಿಲ್ಲ ಎಂದು ಕಿಡಿಕಾರಿದೆ.
ಕನ್ನಡಿಗರನ್ನು ಸಮಸ್ಯೆಗಳು ಕಿತ್ತು ತಿನ್ನುತ್ತಿದ್ದರೂ ಕಾಂಗ್ರೆಸ್ ಸರ್ಕಾರ ತನಗೂ ಅದಕ್ಕೂ ಸಂಬಂಧವೇ ಇಲ್ಲವೆಂಬಂತೆ ಲೂಟಿಯಲ್ಲಿ ನಿರತವಾಗಿದೆ. ಲೂಟಿ ಹೊಡೆಯುವ ಸಮಯದಲ್ಲಿ ಒಗ್ಗಟ್ಟು ತೋರುವ ಕಾಂಗ್ರೆಸ್ಸಿಗರು ಲೂಟಿ ಮುಗಿದ ನಂತರ ಕುರ್ಚಿ ಬೇಕು ಎಂದು ಕಚ್ಚಾಡುವುದು ಅತ್ಯಂತ ಬಾಲಿಶ. ಜನರ ಸಮಸ್ಯೆಗಳಿಗೆ, ಸಂಕಷ್ಟಗಳಿಗೆ ಸ್ಪಂದಿಸದೆ ಕೇವಲ ತಮ್ಮ ಸ್ವಾರ್ಥಕ್ಕಾಗಿ ಕುರ್ಚಿ ಕಿತ್ತಾಟದಲ್ಲಿ ನಿರತವಾಗಿರುವುದು ಏಳು ಕೋಟಿ ಕನ್ನಡಿಗರಿಗೆ ಮಾಡುತ್ತಿರುವ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದೆ.