ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ ಈವರೆಗೆ 1902 ಪ್ರಕರಣಗಳು ದಾಖಲಾಗಿವೆ ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ತುಷಾರ್ ಗಿರಿನಾಥ್, ಒಂದೇ ದಿನದಲ್ಲಿ ಬೆಂಗಳೂರಿನಲ್ಲಿ 65 ಜನರಲ್ಲಿ ಡೆಂಗ್ಯೂ ಸೋಂಕು ಪತ್ತೆಯಾಗಿದೆ. ಬೆಂಗಳೂರಿನಲ್ಲಿ ಡೆಂಗ್ಯೂ ವ್ಯಾಪಕವಾಗಿ ಹರಡುತ್ತಿದ್ದು, ಪಾಲಿಕೆ ಡೆಂಗ್ಯೂ ನಿಯಂತ್ರಣಕ್ಕೆ ಸಜ್ಜಾಗಿದೆ. ವಿಶೇಷ ತಂಡ ರಚಿಸಲಾಗಿದ್ದು, ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಸೆಪ್ಟೆಂಬರ್ ನಲ್ಲಿ ಡೆಂಗ್ಯೂ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಕಳೆದ ವರ್ಷ ಜೂನ್ ನಲ್ಲಿ 750 ಕೇಸ್ ಗಳು ದಾಖಲಾಗಿದ್ದವು. ಆದರೆ ಈ ವರ್ಷ ಜೂನ್ ತಿಂಗಳಲ್ಲೇ 2000 ಕೇಸ್ ಗಳು ದಾಖಲಾಗಿವೆ. ಸೆಪ್ಟೆಂಬರ್ ವೇಳೆಗೆ ಇನ್ನಷ್ಟು ಡೆಂಗ್ಯೂ ಕೇಸ್ ಹೆಚ್ಚಾಗುವ ಸಾಧ್ಯತೆ ಇದೆ. ಹಾಗಾಗಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ ಎಂದರು.
ಮನೆ ಮನೆಗೆ ತೆರಳಿ ಜನರಲ್ಲಿ ಜಾಗೃತಿ ಮೂಡಿಸಲಾಗುವುದು. ಬಸ್ ನಿಲ್ದಾಣಗಳಲ್ಲಿಯೂ ಜಾಹೀರಾತು ಹಾಕಲಿದ್ದೇವೆ ಎಂದರು.
ಡೆಂಗ್ಯೂ ಕಾಣಿಸಿಕೊಂಡ ವ್ಯಕ್ತಿಯಲ್ಲಿ ಬಿಳಿ ರಕ್ತಕಣ 20,000ಕ್ಕಿಂತ ಕಡಿಮೆ ಬಂದರೆ ಅಂತಹ ವ್ಯಕ್ತಿಗೆ ರಕ್ತದ ಅವಶ್ಯಕತೆ ಇರುತ್ತದೆ. ಉಳಿದಂತೆ ರೋಗಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುವುದು. ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಡೆಂಗ್ಯೂ ನಿಯಂತ್ರಣಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.