ಬೆಂಗಳೂರು: ರಾಜ್ಯದಲ್ಲಿ ಮಳೆಯ ಅಬ್ಬರದ ನಡುವೆ ಮಹಾಮಾರಿ ಡೆಂಗ್ಯೂ ಪ್ರಕರಣವೂ ಹೆಚ್ಚುತ್ತಿದೆ. ಡೆಂಗ್ಯೂ ಪ್ರಕರಣ ಹತೋಟಿಗೆ ತರಲು ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿ ಅಧಿಕಾರಿಗಳು ಪ್ರಯತ್ನಿಸುತ್ತಿದ್ದು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಡೆಂಗ್ಯೂ ಹಾಟ್ ಸ್ಪಾಟ್ ಗುರುತಿಸಲಾಗಿದೆ.
ಬಿಬಿಎಂಪಿ ಬೆಂಗಳೂರಿನಲ್ಲಿ 30 ಕಡೆಗಳಲ್ಲಿ ಡೆಂಘೀ ಹಾಟ್ ಸ್ಪಾಟ್ ಗುರುತಿಸಿದೆ. ಹಾಟ್ ಸ್ಪಾಟ್ ಗಳಲ್ಲಿ ಹೆಚ್ಚಿನ ನಿಗಾವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮಹದೇವಪುರ ಕ್ಷೇತ್ರದಲ್ಲಿ ಅತಿ ಹೆಚ್ಚು ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ.
ಡೆಂಗ್ಯೂ ಹಾಟ್ ಸ್ಪಾಟ್ ಗಳಲ್ಲಿ ಬೇವಿನಎಣ್ಣೆ, ಡೀಟ್ ಕ್ರೀಂ ಗಳನ್ನು ವಿತರಿಸಲಾಗುತ್ತಿದೆ. ಸ್ಲಂ ನಿವಾಸಿಗಳಿಗೆ ಉಚಿತವಾಗಿ ಬೇವಿನಎಣ್ಣೆ, ಡೀಟ್ ಕ್ರೀಂ ವಿತರಿಸಲಾಗುತ್ತಿದೆ. ಇದಕ್ಕಾಗಿ 500 ಆಪರೇಟರ್ ಗಳನ್ನು ನೇಮಿಸಲಾಗಿದೆ.
ಬೆಂಗಳೂರಿನಲ್ಲಿ ನಿತ್ಯ 530 ಸ್ಪ್ರೇಯಿಂಗ್ ಮಷೀನ್ ಗಳಿಂದ ಫಾಗಿಂಗ್ ಮಾಡಲು ಸೂಚಿಸಲಾಗಿದ್ದು, ಲಾರ್ವ ಸಂತತಿ ನಾಶಪಡಿಸಲು ನಿರ್ಧರಿಸಲಾಗಿದೆ. ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 386 ಡೆಂಗ್ಯೂ ಪ್ರಕರಣ ಪತ್ತೆಯಾಗಿದ್ದು, ಈ ಮೂಲಕ ಡೆಂಗ್ಯೂ ಪ್ರಕರನ 18,224ಕ್ಕೆ ಏರಿಕೆಯಾಗಿದೆ. 2680 ಜನರಿಗೆ ಚಿಕಿತ್ಸೆ ಮುಂದುವರೆಸಲಾಗಿದೆ.