ನಾಗಪುರ: ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳ ಸಂಬಂಧಿತ ಪ್ರಕರಣಗಳಲ್ಲಿ ವಿವಾದಿತ ತೀರ್ಪು ನೀಡಿ ಚರ್ಚೆಗೆ ಗ್ರಾಸವಾಗಿದ್ದ ನ್ಯಾಯಮೂರ್ತಿ ಪುಷ್ಪಾ ಗನೇಡಿವಾಲಾ ಮತ್ತೊಂದು ತೀರ್ಪು ನೀಡಿದ್ದಾರೆ.
ಬಾಂಬೆ ಹೈಕೋರ್ಟ್ ನಾಗಪುರ ಪೀಠದ ನ್ಯಾಯಮೂರ್ತಿ ಪುಷ್ಪಾ ಗನೇಡಿವಾಲಾ ಅವರು ಹಣಕ್ಕಾಗಿ ಬೇಡಿಕೆ ಇಟ್ಟರೆ ಅದು ಕಿರುಕುಳವಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಗಂಡನ ಹಣದ ಬೇಡಿಕೆಗೆ ಬೇಸತ್ತ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣದಲ್ಲಿ ಪತಿ ಪ್ರಶಾಂತ್ ಎನ್ನುವ ವ್ಯಕ್ತಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ. ಮೇಲ್ಮನವಿ ಅರ್ಜಿ ವಿಚಾರಣೆ ವೇಳೆ ಆತನನ್ನು ನ್ಯಾಯಮೂರ್ತಿ ಪುಷ್ಪಾ ಖುಲಾಸೆಗೊಳಿಸಿ ಬಿಡುಗಡೆ ಮಾಡಿದ್ದಾರೆ.
ಹಣದ ಬೇಡಿಕೆ ಎನ್ನುವುದೇ ಅಸ್ವಷ್ಟ ಶಬ್ಧವಾಗಿದೆ. ಈ ಪ್ರಕರಣದಲ್ಲಿ ಶಿಕ್ಷೆ ನೀಡುವುದು ಸರಿಯಲ್ಲ. ಪತ್ನಿ ಬಳಿ ಹಣದ ಬೇಡಿಕೆ ಇಡುವುದು ಕಿರುಕುಳವಾಗುವುದಿಲ್ಲವೆಂದು ಅವರು ತೀರ್ಪು ನೀಡಿದ್ದಾರೆ. ಇತ್ತೀಚೆಗೆ ಅನೇಕ ವಿವಾದಿತ ತೀರ್ಪುಗಳನ್ನು ನೀಡಿದ ಪುಷ್ಪಾ ಅವರನ್ನು ಖಾಯಂ ನ್ಯಾಯಮೂರ್ತಿಯಾಗಿ ನೇಮಕ ಮಾಡುವ ಶಿಫಾರಸನ್ನು ಕೊಲಿಜಿಯಂ ಹಿಂಪಡೆದುಕೊಂಡಿದೆ.