
ಬೆಂಗಳೂರು: ಇ- ಆಟೋಗಳಿಗೂ ಪರ್ಮಿಟ್ ಕಡ್ಡಾಯಗೊಳಿಸುವಂತೆ ಸಂಘಟನೆಗಳು ಒತ್ತಾಯಿಸಿವೆ. ನಿಗದಿತ ಪರ್ಮಿಟ್ ಪಡೆಯದಿದ್ದರೂ ಎಲೆಕ್ಟ್ರಿಕ್ ಆಟೋಗಳಿಗೆ ಸಾರಿಗೆ ಇಲಾಖೆಯಿಂದ ನೋಂದಣಿ ಮಾಡುತ್ತಿರುವುದು ಹಾಗೂ ಖಾಸಗಿ ಸಂಸ್ಥೆಯ ಹೆಸರಲ್ಲಿ ಎಲೆಕ್ಟ್ರಿಕ್ ಆಟೋಗಳಿಗೆ ನೋಂದಣಿ ಮಾಡುವುದನ್ನು ಸ್ಥಗಿತಗೊಳಿಸಬೇಕು ಎಂದು 8 ಚಾಲಕರ ಸಂಘಟನೆಗಳ ಒಳಗೊಂಡ ಸ್ವಾಭಿಮಾನಿ ಚಾಲಕ ಸಂಘಟನೆಗಳ ಒಕ್ಕೂಟದ ವತಿಯಿಂದ ಸಾರಿಗೆ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿದ ಬಜಾಜ್ ಕ್ಯೂಟ್ ವಾಹನ ಚಾಲಕರ ಘಟಕದ ಅಧ್ಯಕ್ಷ ದುರ್ಗೆಗೌಡ, ಯಾವುದೇ ಸಂಸ್ಥೆಯ ಹೆಸರಲ್ಲಿ ಎಲೆಕ್ಟ್ರಿಕ್ ಆಟೋಗಳನ್ನು ಸಮೂಹ ನೋಂದಣಿ ಮಾಡದಂತೆ ಸರ್ಕಾರದ ಆದೇಶವಿದೆ. ಹೀಗಾಗಿ ಕೆಲವು ನಕಲಿ ಸಂಸ್ಥೆಗಳನ್ನು ಸೃಷ್ಟಿಸಿ ಕನಿಷ್ಠ 5 ಆಟೋಗಳಿಗೆ ನಿಗದಿತ ಪರ್ಮಿಟ್ ಇಲ್ಲದಿದ್ದರೂ ನೋಂದಣಿ ಮಾಡಿಕೊಡಲಾಗುತ್ತಿದೆ. ಇದರಿಂದಾಗಿ ಸಾಮಾನ್ಯ ಆಟೋ ಚಾಲಕರಿಗೆ ಸಮಸ್ಯೆಯಾಗುತ್ತಿದ್ದು, ಅವರ ಆದಾಯಕ್ಕೆ ಕುತ್ತು ಬಂದಿದೆ ಎಂದು ತಿಳಿಸಿದ್ದಾರೆ.
ಈ ನಡುವೆ ಕೇಂದ್ರ ಸರ್ಕಾರ ಎಲೆಕ್ಟ್ರಿಕ್ ಆಟೋಗಳಿಗೆ ಪರ್ಮಿಟ್ ಅವಶ್ಯಕತೆ ಇಲ್ಲ ಎಂದು ತಿಳಿಸಿ ಅದರ ಜಾರಿಯನ್ನು ಆಯಾ ರಾಜ್ಯದ ವಿವೇಚನೆಗೆ ಬಿಟ್ಟಿದೆ. ಆದರೆ, ಕೇರಳ, ಮಹಾರಾಷ್ಟ್ರದಂತಹ ರಾಜ್ಯಗಳಲ್ಲಿ ಎಲೆಕ್ಟ್ರಿಕ್ ಆಟೋಗಳಿಗೆ ಪರ್ಮಿಟ್ ಕಡ್ಡಾಯಗೊಳಿಸಲಾಗಿದೆ. ಕರ್ನಾಟಕದಲ್ಲಿಯೂ ಪರ್ಮಿಟ್ ಕಡ್ಡಾಯಗೊಳಿಸಬೇಕು. ಒಂದು ಸಂಸ್ಥೆಯ ಹೆಸರಲ್ಲಿ ಹಲವು ಆಟೋಗಳ ನೋಂದಣಿ ಮಾಡುವುದಕ್ಕೆ ಕಡಿವಾಣ ಹಾಕಬೇಕು ಎಂದು ಅವರು ಒತ್ತಾಯಿಸಿದ್ದಾರೆ.