ಬೆಂಗಳೂರು: ಕೇಂದ್ರ ಸರ್ಕಾರದ ಮಾದರಿಯಲ್ಲಿ ರಾಜ್ಯ ಸರ್ಕಾರ ಕೂಡ ತನ್ನ ವ್ಯಾಪ್ತಿಯ ಶಾಲೆಗಳಲ್ಲಿ ಕಲಿಕಾ ಗುಣಮಟ್ಟ ಸುಧಾರಣೆಗೆ ಐದು ಮತ್ತು ಎಂಟನೇ ತರಗತಿಯಲ್ಲಿ ಅನುತ್ತೀರ್ಣಕ್ಕೆ ಅವಕಾಶ ಕಲ್ಪಿಸುವ ನಿಯಮ ಜಾರಿಗೊಳಿಸಬೇಕೆಂದು ಖಾಸಗಿ ಶಾಲಾ ಸಂಘಟನೆ ಕ್ಯಾಮ್ಸ್ ಆಗ್ರಹಿಸಿದೆ.
ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಈ ಕುರಿತಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರ ಬರೆದಿದ್ದಾರೆ. ಆರ್‌ಟಿಇ ಕಾಯ್ದೆ ತಿದ್ದುಪಡಿ 2019ರ ಅನುಷ್ಠಾನದ ಮೂಲಕ ಐದು ಮತ್ತು ಎಂಟನೇ ತರಗತಿ ವಾರ್ಷಿಕ ಪರೀಕ್ಷೆ, ನಂತರ ನಡೆಸುವ ಮರು ಪರೀಕ್ಷೆ ಎರಡರಲ್ಲಿಯೂ ಅನುತ್ತೀರ್ಣರಾಗುವ ಮಕ್ಕಳನ್ನು ಅದೇ ತರಗತಿಯಲ್ಲಿ ತಡೆಹಿಡಿಯಲು ನಿಯಮಗಳನ್ನು ಜಾರಿಗೊಳಿಸಿರುವ ಕೇಂದ್ರ ಸರ್ಕಾರದ ಕ್ರಮ ಸ್ವಾಗತಾರ್ಹವಾಗಿದೆ. ರಾಜ್ಯದಲ್ಲಿಯೂ ಇದನ್ನು ಜಾರಿಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.
ಮಕ್ಕಳ ಕಲಿಕಾ ಗುಣಮಟ್ಟ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿರುವುದು ಸಿಎಜಿ ವರದಿಯಲ್ಲಿಯೂ ಗೊತ್ತಾಗಿದೆ. ಎಂಟನೇ ತರಗತಿವರೆಗೆ ಯಾರನ್ನೂ ಅನುತ್ತೀರ್ಣಗೊಳಿಸದಂತೆ 9ನೇ ತರಗತಿಯಲ್ಲಿ ಅನುಕಂಪದಿಂದ ಪಾಸ್ ಮಾಡಲು, 10ನೇ ತರಗತಿಯಲ್ಲಿ ಫಲಿತಾಂಶ ಉತ್ತಮಪಡಿಸಲು ಶಿಕ್ಷಕರನ್ನು ಹಿಂಸೆ ಮಾಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿರುವ ಅವರು, ಕೇಂದ್ರದ ಮಾದರಿಯಲ್ಲಿ ರಾಜ್ಯದಲ್ಲಿಯೂ 5 ಮತ್ತು 8ನೇ ತರಗತಿಯ ಅನುತ್ತೀರ್ಣಕ್ಕೆ ಅವಕಾಶ ನೀಡುವ ನಿಯಮ ಅನುಷ್ಟಾನಗೊಳಿಸಬೇಕೆಂದು ಮನವಿ ಮಾಡಿದ್ದಾರೆ.