ಬೆಂಗಳೂರು: ಒಂದನೇ ತರಗತಿಯಿಂದ ಆಂಗ್ಲ ಮಾಧ್ಯಮದಲ್ಲಿ ಬೋಧನೆ ಮಾಡುತ್ತಿರುವ 25 ಸರ್ಕಾರಿ ಶಾಲೆಗಳಲ್ಲಿ ಹೆಚ್ಚುವರಿಯಾಗಿ ಮತ್ತೊಂದು ವಿಭಾಗ ಆರಂಭಿಸಲು ಶಿಕ್ಷಣ ಇಲಾಖೆ ಅನುಮತಿ ನೀಡಿದೆ.
ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ತರಗತಿಗಳನ್ನು ಆರಂಭಿಸಿರುವ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ದಾಖಲಾತಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಹೀಗಾಗಿ ವಿವಿಧ ಜಿಲ್ಲೆಯ 25 ಶಾಲೆಗಳಲ್ಲಿ ಹೆಚ್ಚುವರಿಯಾಗಿ ಮತ್ತೊಂದು ಆಂಗ್ಲ ಮಾಧ್ಯಮ ತರಗತಿ ವಿಭಾಗ ತೆರೆಯಲು ಶಿಕ್ಷಣ ಇಲಾಖೆ ಅನುಮತಿ ನೀಡಿದೆ.
ಈಗಾಗಲೇ ರಾಜ್ಯದಲ್ಲಿ 2404 ಸರ್ಕಾರಿ ಶಾಲೆಗಳಲ್ಲಿ ಕನ್ನಡ ಮತ್ತು ಉರ್ದು ಮಾಧ್ಯಮದ ಜೊತೆಗೆ ಆಂಗ್ಲ ಮಾಧ್ಯಮ ತರಗತಿಗಳಿಗೂ ಅವಕಾಶ ಕಲ್ಪಿಸಲಾಗಿದೆ. ಆಂಗ್ಲ ಮಾಧ್ಯಮಕ್ಕೆ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಳ ಮತ್ತು ಪೋಷಕರಿಂದ ಬೇಡಿಕೆ ಬಂದ ಹಿನ್ನೆಲೆಯಲ್ಲಿ 2024 -25 ನೇ ಸಾಲಿನಲ್ಲಿ 1419 ಶಾಲೆಗಳನ್ನು ಆರಂಭಿಸಲು ಅನುಮತಿ ನೀಡಲಾಗಿತ್ತು. ಈಗ 25 ಶಾಲೆಗಳಲ್ಲಿ ಹೆಚ್ಚುವರಿ ಆಂಗ್ಲ ಮಾಧ್ಯಮ ವಿಭಾಗ ತೆರೆಯಲು ಸಮ್ಮತಿಸಲಾಗಿದೆ. ಆರ್ಥಿಕ ಹೊರೆಯಾಗದಂತೆ ಸಂಪನ್ಮೂಲ ಬಳಸಲು ಸೂಚಿಸಲಾಗಿದೆ.
ಬೆಂಗಳೂರು ಉತ್ತರ, ಬೆಂಗಳೂರು ಗ್ರಾಮಾಂತರ, ವಿಜಯಪುರ, ಚಿತ್ರದುರ್ಗ, ಶಿರಸಿ, ತುಮಕೂರು, ದಾವಣಗೆರೆ, ರಾಮನಗರ, ಹಾವೇರಿ, ಚಿಕ್ಕೋಡಿ, ಬಾಗಲಕೋಟೆಯಲ್ಲಿ ಈಗಾಗಲೇ ಇರುವ ಆಂಗ್ಲ ಮಾಧ್ಯಮದ ಒಂದು ವಿಭಾಗದ ಜೊತೆಗೆ ಇನ್ನೊಂದು ವಿಭಾಗ ಆರಂಭಿಸಲು ಅನುಮತಿ ನೀಡಲಾಗಿದೆ. 25 ಶಾಲೆಗಳಲ್ಲಿ ಹೆಚ್ಚುವರಿ ಸೆಕ್ಷನ್ ಆರಂಭಿಸಲಾಗುವುದು.