alex Certify ಅರೆಕಾಲಿಕ ಉಪನ್ಯಾಸಕರು, ಪ್ರಾಧ್ಯಾಪಕರಿಗೆ ಇಲ್ಲಿದೆ ಗುಡ್ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅರೆಕಾಲಿಕ ಉಪನ್ಯಾಸಕರು, ಪ್ರಾಧ್ಯಾಪಕರಿಗೆ ಇಲ್ಲಿದೆ ಗುಡ್ ನ್ಯೂಸ್

ಬೆಂಗಳೂರು: ಯುಜಿಸಿ ವೇತನ ಹಿಂಬಾಕಿ ಪಾವತಿ, ವರ್ಗಾವಣೆ, ಪ್ರಾಂಶುಪಾಲರ ನೇಮಕ ಸೇರಿ ಸರ್ಕಾರಿ ಕಾಲೇಜು ಪ್ರಾಧ್ಯಾಪಕರ ವಿವಿಧ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಗಮನಹರಿಸಿರುವ ಉನ್ನತ ಶಿಕ್ಷಣ ಸಚಿವರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ, ಎಲ್ಲ ಬೇಡಿಕೆಗಳನ್ನು ಆದಷ್ಟು ಶೀಘ್ರವೇ ಈಡೇರಿಸಲಾಗುವುದು ಎಂದು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಗುರುವಾರ ಕರ್ನಾಟಕ ಸರ್ಕಾರಿ ಕಾಲೇಜುಗಳ ಬೋಧಕರ ಸಂಘದ ಅಧ್ಯಕ್ಷ ಡಾ.ಡಿ.ಎಂ. ಮಂಜುನಾಥ್‌ ಮತ್ತಿತರೆ ಪದಾಧಿಕಾರಿಗಳ ಜತೆ ಮಾತುಕತೆ ನಡೆಸಿದ ಅವರು, ಈ ಬಗ್ಗೆ ಕ್ರಮಗಳನ್ನು ಕ್ಷಿಪ್ರವಾಗಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಪ್ರಾಧ್ಯಾಪಕರ ರಾಷ್ಟ್ರೀಯ ಪಿಂಚಣಿ ಯೋಜನೆಗೆ ರಾಜ್ಯ ಸರ್ಕಾರ ಪಾಲು ತುಂಬಲಾಗಿಲ್ಲ. ಈ ಮೊತ್ತವನ್ನು ಕೂಡಲೇ ತುಂಬುವುದು. 2006 ರ ಯುಜಿಸಿ ವೇತನ ಹಿಂಬಾಕಿ ಮತ್ತು 2019ರ ಏಪ್ರಿಲ್ ತಿಂಗಳಿನಿಂದ ಪಾವತಿಯಾಗಬೇಕಿರುವ ವೇತನ ಕುರಿತು ಹಣಕಾಸು ಇಲಾಖೆಯೊಂದಿಗೆ ಚರ್ಚಿಸಲಾಗುವುದು ಎಂದು ಮಾಹಿತಿ ನೀಡಿದರು.

ವರ್ಗಾವಣೆ ಪ್ರಕ್ರಿಯೆ ಶೀಘ್ರ ಆರಂಭ:

2021ರ ವರ್ಗಾವಣೆ ಕಾಯ್ದೆಯ ಪ್ರಕಾರ ಈಗಾಗಲೇ ಸರ್ಕಾರ ವರ್ಗಾವಣೆ ನೀತಿ ರೂಪಿಸಿದೆ. ಈ ವರ್ಷದ ವರ್ಗಾವಣೆ ಪ್ರಕ್ರಿಯೆಯನ್ನು ಆದಷ್ಟು ಬೇಗ ಆರಂಭಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಜತೆಗೆ ಪ್ರಾಂಶುಪಾಲರ ಹುದ್ದೆ ಭರ್ತಿಗೆ ಕೂಡಲೇ ಚಾಲನೆ ನೀಡುವುದು ಹಾಗೂ ಗರಿಷ್ಠ ವಯೋಮಿತಿಗೆ ವಿನಾಯಿತಿ ನೀಡಿ ಯುಜಿಸಿ ವೇತನ ಶ್ರೇಣಿಯಲ್ಲಿನ ಸಹ ಪ್ರಾಧ್ಯಾಪಕರ ನೇಮಕ ಮಾಡಿಕೊಳ್ಳುವುದು, ಪ್ರಾಧ್ಯಾಪಕ ಹುದ್ದೆಯ ಪದೋನ್ನತಿಗೆ ಕೂಡಲೇ ಚಾಲನೆ ನೀಡುವ ಬಗ್ಗೆಯೂ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು ಎಂದು ತಿಳಿಸಿದ್ದಾರೆ.

ಪಿಹೆಚ್ʼಡಿ ವೇತನ ಬಡ್ತಿ ತಾರತಮ್ಯ ಬಗೆಹರಿಸುವ ಸಲುವಾಗಿ ಆಯುಕ್ತರೊಂದಿಗೆ ಪ್ರತ್ಯೇಕ ಸಭೆ ನಡೆಸುವಂತೆ ಸೂಚಿಸಿದ ಉಪ ಮುಖ್ಯಮಂತ್ರಿಗಳು, ಪಿಹೆಚ್‌ ಡಿ ಮಾಡಲು ಪ್ರಾಧ್ಯಾಪಕರು ಅರ್ಜಿ ಸಲ್ಲಿಸುವ ವೇಳೆ ನಿರಪೇಕ್ಷಣಾ ಪತ್ರ ಕೇಳಬಾರದು. ಬದಲಿಗೆ ಪ್ರವೇಶ ಪಡೆದ ಮೇಲೆ ಈ ಪತ್ರವನ್ನು ಸಲ್ಲಿಸಿದರೆ ಸಾಕು. ಈ ಬಗ್ಗೆ ಎಲ್ಲ ವಿವಿಗಳಿಗೆ ಮಾಹಿತಿ ನೀಡಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಬೋಧಕ ಸಿಬ್ಬಂದಿ ಪದನಾಮ

ಕಾಲೇಜುಗಳಲ್ಲಿ ಈವರೆಗೂ ಬೋಧಕೇತರ ಸಿಬ್ಬಂದಿಯಾಗಿದ್ದ ಗ್ರಂಥಪಾಲಕರು ಹಾಗೂ ದೈಹಿಕ ಶಿಕ್ಷಣ ಸಿಬ್ಬಂದಿಗೆ ಪ್ರಾಧ್ಯಾಪಕರ ಸ್ಥಾನಮಾನ ನೀಡುವುದು, ಸರ್ಕಾರಿ ಸ್ವಾಮ್ಯದಲ್ಲಿರುವ 108 ಸರ್ಕಾರಿ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಅರ್ಹ ಪ್ರಾಧ್ಯಾಪಕರಿಗೆ ಪಿಹೆಚ್‌ ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಲು ಅವಕಾಶ ಕೊಡುವ ಬಗ್ಗೆ ಪರಿಶೀಲಿಸಲು ನಿರ್ಧಾರ ಕೈಗೊಳ್ಳಲಾಯಿತು ಎಂದು ಡಿಸಿಎಂ ತಿಳಿಸಿದರು.

2003ರಲ್ಲಿ ನೇಮಕಗೊಂಡ ಅರೆಕಾಲಿಕ ಉಪನ್ಯಾಸಕರಿಗೆ ಮಾನವೀಯತೆಯ ಆಧಾರದ ಮೇಲೆ ಸ್ತಾನೀಕರಣ ನೀಡಲು ಸಕಾರಾತ್ಮಕವಾಗಿ ಪರಿಶೀಲಿಸಲು ಒಪ್ಪಿಗೆ ಹಾಗೂ ಬಾಕಿ ಇರುವ ಸ್ತಾನೀಕರಣ ಪ್ರಸ್ತಾವನೆಗಳನ್ನು ಕೆಲವೇ ದಿನಗಳಲ್ಲಿ ಮಂಜೂರು ಮಾಡಲಾಗುವುದು. ಜತೆಗೆ; 310 ಪ್ರಾಂಶುಪಾಲರನ್ನು ಆದಷ್ಟು ಬೇಗ ನೇಮಕ ಮಾಡಲಾಗುವುದು ಎಂದು ಡಿಸಿಎಂ ವಿವರ ನೀಡಿದರು.

ಯುಜಿಸಿ ವೇತನ ಪಡೆಯುವ ಪ್ರಾಧ್ಯಾಪಕರಿಗೆ ವಾಹನ, ಮನೆ ಮತ್ತಿತರೆ ವಸ್ತುಗಳ ಖರೀದ ಮೇಲೆ ಇರುವ ಷರತ್ತುಗಳನ್ನು ಸರಳಗೊಳಿಸಲು ಬಗ್ಗೆಯೂ ಚರ್ಚಿಸಲಾಯಿತು ಎಂದು ಡಿಸಿಎಂ ಹೇಳಿದರು.

ಸಭೆಯಲ್ಲಿ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್‌, ಮುಖ್ಯ ಆಡಳಿತಾಧಿಕಾರಿ ಬಾಲಚಂದ್ರ ಮತ್ತಿತರೆ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...