ಬೆಂಗಳೂರು: 10 ಮಹಾನಗರ ಪಾಲಿಕೆಗಳ ನೌಕರರ ಬೇಡಿಕೆಗಳನ್ನು ರಾಜ್ಯ ಸರ್ಕಾರ ಈಡೇರಿಸದಿದ್ದರೆ ಸೆಪ್ಟೆಂಬರ್ 5 ರಿಂದ ಕೆಲಸ ಸ್ಥಗಿತಗೊಳಿಸಲು ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘ ನಿರ್ಧಾರ ಕೈಗೊಂಡಿದೆ.
ಸಂಘದ ಅಧ್ಯಕ್ಷ ಎ. ಅಮೃತ್ ರಾಜ್ ಈ ಬಗ್ಗೆ ಮಾಹಿತಿ ನೀಡಿದ್ದು, ಮಂಗಳವಾರ ನಡೆದ ಸಂಘದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಬೇಡಿಕೆ ಈಡೇರಿಸುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ ಮಾಡಬೇಕು. ಪಾಲಿಕೆ ಅಧಿಕಾರಿ, ನೌಕರರಿಗೂ ಕೆಜಿಐಡಿ, ಜಿಪಿಎಫ್ ಸೌಲಭ್ಯ ಕಲ್ಪಿಸಬೇಕು. ಎರವಲು ಸೇವೆ ಅಧಿಕಾರಿ ಮತ್ತು ನೌಕರರನ್ನು ಮಾತೃ ಇಲಾಖೆಗೆ ಹಿಂತಿರುಗಿಸಿ ಖಾಲಿ ಇರುವ ಎಲ್ಲಾ ವೃಂದದ ಮುಂಬಡ್ತಿ ನೀಡಬೇಕು ಎಂದು ಒತ್ತಾಯಿಸಲಾಗಿದೆ.
ಸೆಪ್ಟೆಂಬರ್ 4ರ ವರೆಗೆ ಗಡುವು ನೀಡಲಾಗಿದ್ದು, ಅಲ್ಲಿಯವರೆಗೆ ಬೇಡಿಕೆ ಈಡೇರಿಸದಿದ್ದಲ್ಲಿ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಾಗುವುದು ಎನ್ನಲಾಗಿದೆ.