ಬೆಂಗಳೂರು: ಇಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ ಗಳ ಶುಲ್ಕವನ್ನು ಶೇಕಡ 15ರಷ್ಟು ಹೆಚ್ಚಳ ಮಾಡಲು ಖಾಸಗಿ ವೃತ್ತಿಪರ ಕಾಲೇಜುಗಳ ಆಡಳಿತ ಮಂಡಳಿ ಸರ್ಕಾರಕ್ಕೆ ಆಗ್ರಹಿಸಿದೆ.
ಈಗಾಗಲೇ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ನಡೆಸಿದ ಬಹುತೇಕ ಪ್ರವೇಶ ಪರೀಕ್ಷೆಗಳ ಫಲಿತಾಂಶ ಪ್ರಕಟವಾಗಿದೆ. ರಾಜ್ಯದಲ್ಲಿ ಶುಲ್ಕ ನಿಗದಿ ಬಗ್ಗೆ ಸರ್ಕಾರ ಯಾವುದೇ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ. ಅನುದಾನ ರಹಿತ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಸಂಘ ಹಿಂದೆ ಸಲ್ಲಿಸಿದ ಬೇಡಿಕೆಗೂ ಸ್ಪಂದಿಸಿಲ್ಲ.
ಬಿಜೆಪಿ ಅವಧಿಯಲ್ಲಿ ಹೊರಡಿಸಿದ್ದ ಶೇಕಡ 10ರಷ್ಟು ಶುಲ್ಕ ಹೆಚ್ಚಳದ ಆದೇಶವನ್ನು ಕಳೆದ ವರ್ಷ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ತಡೆಹಿಡಿದು ಶೇಕಡ 7ರಷ್ಟು ಶುಲ್ಕ ಹೆಚ್ಚಳಕ್ಕೆ ಅನುಮತಿ ನೀಡಿತ್ತು. 2022-23ನೇ ಶೈಕ್ಷಣಿಕ ಸಾಲಿನಲ್ಲಿ ಸರ್ಕಾರಿ ಹಾಗೂ ಅನುದಾನಿತ ಇಂಜಿನಿಯರಿಂಗ್ ಕಾಲೇಜುಗಳ ಶುಲ್ಕ 38,200 ರೂ., ಅಲ್ಪಸಂಖ್ಯಾತ ಕಾಲೇಜುಗಳು ಸೇರಿ ಅನುದಾನ ರಹಿತ ಕಾಲೇಜುಗಳಲ್ಲಿ 98,984 ರೂ., ಖಾಸಗಿ ಮತ್ತು ಡೀಮ್ಡ್ ವಿವಿಗಳಲ್ಲಿ 91,796 ರೂ. ಶುಲ್ಕವಿತ್ತು. ಈಗ ಶೇಕಡ 15ರಷ್ಟು ಶುಲ್ಕ ಹೆಚ್ಚಳಕ್ಕೆ ಕಾಲೇಜುಗಳ ಆಡಳಿತ ಮಂಡಳಿಗಳು ಸರ್ಕಾರಕ್ಕೆ ಒತ್ತಾಯಿಸಿವೆ.