ಕೊರೊನಾ ವಿರುದ್ಧ ಲಸಿಕೆ ಮೊದಲ ಅಸ್ತ್ರವಾಗಿದೆ. ಕೊರೊನಾದ ಎರಡೂ ಲಸಿಕೆ ತೆಗೆದುಕೊಂಡವರಿಗೆ ಕೊರೊನಾ ಹೆಚ್ಚಿನ ಮಟ್ಟದಲ್ಲಿ ಕಾಡುವುದಿಲ್ಲ ಎಂದು ನಂಬಲಾಗಿದೆ. ಆದ್ರೆ ಡೆಲ್ಟಾ ರೂಪಾಂತರಗಳು ಈಗ ತಲೆನೋವು ತಂದಿವೆ.
ಕೊರೊನಾ ಲಸಿಕೆಯ ಎರಡು ಡೋಸ್ ತೆಗೆದುಕೊಂಡವರಿಗೂ ಡೆಲ್ಟಾ ರೂಪಾಂತರ ಕಾಡ್ತಿದೆ. ಕೊರೊನಾ ವೈರಸ್ ಬಗ್ಗೆ ವಿಶ್ವದಾದ್ಯಂತ ಸಂಶೋಧನೆಗಳು ನಡೆಯುತ್ತಿವೆ. ಕೊರೊನಾ ಬಗ್ಗೆ ಸಂಶೋಧನೆ ನಡೆಸಿದ 10 ವಿಜ್ಞಾನಿಗಳು, ಕೊರೊನಾ ಲಸಿಕೆ, ಕೊರೊನಾ ವಿರುದ್ಧ ಹೋರಾಡಲು ಹೆಚ್ಚು ಪರಿಣಾಮಕಾರಿ ಎಂದಿದ್ದಾರೆ. ಕೊರೊನಾ ಲಸಿಕೆಯನ್ನು ಆದಷ್ಟು ಬೇಗ ಪಡೆಯುವಂತೆ ಸಲಹೆ ನೀಡಿದ್ದಾರೆ.
ವಿಜ್ಞಾನಿಗಳ ಪ್ರಕಾರ, ಕೊರೊನಾ ವೈರಸ್‌ನ ಇತರ ರೂಪಾಂತರಗಳಿಗಿಂತ ಭಾರತದಲ್ಲಿ ಗುರುತಿಸಲಾದ ಡೆಲ್ಟಾ ರೂಪಾಂತರವು ಹೆಚ್ಚು ಅಪಾಯಕಾರಿ. ಇದು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಬಹಳ ಸುಲಭವಾಗಿ ವರ್ಗಾಯಿಸಲ್ಪಡುತ್ತದೆ. ವರದಿಯ ಪ್ರಕಾರ, ಇದು ಹಿಂದಿನ ರೂಪಾಂತರಗಳಿಗಿಂತ ಹೆಚ್ಚು ವೇಗವಾಗಿ,ಎ ರಡು ಡೋಸ್ ಲಸಿಕೆ ಹಾಕಿದ ಜನರಿಗೆ ಸೋಂಕು ತಗಲುವ ಸಾಮರ್ಥ್ಯ ಹೊಂದಿದೆ. ವೈರಸ್ ಸ್ವತಃ ಬದಲಾಗುತ್ತಾ ಹೋಗುತ್ತದೆ. ಹೊಸ ರೂಪದಲ್ಲಿ ಹೊರಬರುತ್ತದೆ. ಇದರ ಹೊಸ ರೂಪ ಕೆಲವೊಮ್ಮೆ ಮೂಲಕ್ಕಿಂತ ಹೆಚ್ಚು ಅಪಾಯಕಾರಿ ಎಂದು ತಜ್ಞರು ಹೇಳಿದ್ದಾರೆ.
ಎರಡು ಡೋಸ್ ಲಸಿಕೆ ಪಡೆದವರು ಕೂಡ, ಡೆಲ್ಟಾ ರೂಪಾಂತರಕ್ಕೆ ಪರಿಹಾರ ಕಂಡು ಹಿಡಿಯುವವರೆಗೂ ಮಾಸ್ಕ್, ಸಾಮಾಜಿಕ ಅಂತರ, ನೈರ್ಮಲ್ಯೀಕರಣ ಅನಿವಾರ್ಯವೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.