
ಜಾಗತಿಕ ಆರ್ಥಿಕ ಹಿಂಜರಿತದ ಭೀತಿಯಿಂದ ಬಹು ರಾಷ್ಟ್ರೀಯ ಕಂಪನಿಗಳು ಉದ್ಯೋಗಿಗಳನ್ನು ವಜಾಗೊಳಿಸುವ ಪ್ರಕ್ರಿಯೆ ಆರಂಭಿಸಿದ್ದು, ಕಳೆದ ವರ್ಷದ ಡಿಸೆಂಬರ್ ನಿಂದ ಈವರೆಗೆ ಲಕ್ಷಾಂತರ ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಈ ಪ್ರಕ್ರಿಯೆ ಈಗಲೂ ಮುಂದುವರೆದಿದ್ದು, ಮತ್ತಷ್ಟು ಮಂದಿ ಕೆಲಸ ಕಳೆದುಕೊಳ್ಳಲಿದ್ದಾರೆ.
ಮೈಕ್ರೋಸಾಫ್ಟ್, ಮೆಟಾ, ಅಲ್ಫಾಬೆಟ್, ಅಮೆಜಾನ್, ಟ್ವಿಟ್ಟರ್ ಸೇರಿದಂತೆ ಹಲವು ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಈಗಾಗಲೇ ಮನೆಗೆ ಕಳುಹಿಸಿದ್ದು, ಈಗ ಮತ್ತೊಂದು ಬಹುರಾಷ್ಟ್ರೀಯ ಕಂಪನಿ ಈ ಪಟ್ಟಿಗೆ ಸೇರ್ಪಡೆಗೊಂಡಿದೆ. ಹೌದು, ಕಂಪ್ಯೂಟರ್ ತಯಾರಿಕಾ ಕಂಪನಿ ಡೆಲ್, ಜಾಗತಿಕವಾಗಿ 6,650 ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲಿದೆ.
ಈ ಬೆಳವಣಿಗೆಗಳ ಮಧ್ಯೆ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವ ವಿಧಾನದ ಕುರಿತು ಆಕ್ಷೇಪ ವ್ಯಕ್ತವಾಗುತ್ತಿದ್ದು, ಯಾವುದೇ ಮಾನದಂಡವಿಲ್ಲದೆ ಹತ್ತು ವರ್ಷಗಳಿಗೂ ಅಧಿಕ ಕಾಲ ಉತ್ತಮ ಕಾರ್ಯ ಕ್ಷಮತೆಯಿಂದ ಕೆಲಸ ಮಾಡಿದವರಿಗೂ ಸಹ ಯಾವುದೇ ಮಾಹಿತಿ ನೀಡದೆ ವಜಾಗೊಳಿಸಲಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ.