ರಾಗಿ ಅಂಟು ಮುಕ್ತ ಧಾನ್ಯ. ರಾಗಿಯಲ್ಲಿ ಕ್ಯಾಲ್ಸಿಯಂ, ಪ್ರೊಟೀನ್ ಮತ್ತು ಡಯೆಟರಿ ಫೈಬರ್‌ನಂತಹ ಪೋಷಕಾಂಶಗಳಿವೆ. ಇದರ ಬಳಕೆಯು ನಮ್ಮ ದೇಹದಲ್ಲಿನ ಕ್ಯಾಲ್ಸಿಯಂ ಕೊರತೆಯನ್ನು ಪೂರೈಸಲು ಸಹಾಯ ಮಾಡುತ್ತದೆ. ಮಧುಮೇಹಿಗಳಿಗೆ ರಾಗಿ ತಿನ್ನುವುದು ತುಂಬಾ ಪ್ರಯೋಜನಕಾರಿ. ಇದಲ್ಲದೆ ರಾಗಿ ಸೇವನೆಯಿಂದ ದೇಹದಲ್ಲಿನ ರಕ್ತದ ಕೊರತೆಯನ್ನು ನಿವಾರಿಸಬಹುದು. ಸಾಮಾನ್ಯವಾಗಿ ರಾಗಿ ಮುದ್ದೆ ಮತ್ತು ರಾಗಿ ರೊಟ್ಟಿ ಮಾಡಿ ತಿನ್ನುತ್ತಾರೆ. ಇವುಗಳ ಬದಲು ರಾಗಿ ಉತ್ತಪವನ್ನು ಕೂಡ ಟ್ರೈ ಮಾಡಬಹುದು. ಇದು ಅತ್ಯಂತ ರುಚಿಕರ ಮತ್ತು ಪೌಷ್ಠಿಕಾಂಶಗಳಿಂದ ಕೂಡಿರುತ್ತದೆ. ತೂಕ ಇಳಿಸಲು ಬಯಸುವವರು ಕೂಡ ಇದನ್ನು ತಿನ್ನಬಹುದು.
ರಾಗಿ ಉತ್ತಪ್ಪ ಮಾಡಲು ಬೇಕಾಗುವ ಸಾಮಾಗ್ರಿಗಳು- 1/2 ಕಪ್ ರಾಗಿ 1/3 ಕಪ್ ಅಕ್ಕಿ1/4 ಕಪ್ ಉದ್ದಿನ ಬೇಳೆ 1 ಟೊಮೆಟೊ3-4 ಹಸಿರು ಮೆಣಸಿನಕಾಯಿಗಳು1 ಈರುಳ್ಳಿ1/4 ಟೀಸ್ಪೂನ್ ಮೆಂತ್ಯದ ಕಾಳು2-3 ಚಮಚ ಕೊತ್ತಂಬರಿ ಸೊಪ್ಪು2-3 ಚಮಚ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.
ರಾಗಿ ಉತ್ತಪ್ಪ ಮಾಡುವುದು ಹೇಗೆ?
ರಾಗಿ ಉತ್ತಪ್ಪ ಮಾಡಲು ಮೊದಲು ರಾಗಿ ಮತ್ತು ಅಕ್ಕಿಯನ್ನು ಸ್ವಚ್ಛಗೊಳಿಸಿ.ಇದರೊಂದಿಗೆ ಉದ್ದಿನಬೇಳೆ ಮತ್ತು ಮೆಂತ್ಯವನ್ನು ಹಾಕಿ ಇವೆಲ್ಲವನ್ನೂ ಬೇರೆ ಬೇರೆ ಪಾತ್ರೆಗಳಲ್ಲಿ ಸುಮಾರು 5-6 ಗಂಟೆಗಳ ಕಾಲ ನೆನೆಸಿಡಿ. ನಂತರ ಮಿಕ್ಸರ್ ಜಾರ್‌ಗೆ ಉದ್ದಿನ ಬೇಳೆಯನ್ನು ಹಾಕಿ ನಯವಾದ ಪೇಸ್ಟ್ ಮಾಡಿ. ಅದನ್ನು ಬೇರೆ ಪಾತ್ರೆಗೆ ಸುರಿದಿಟ್ಟುಕೊಂಡು ರಾಗಿ ಮತ್ತು ಅಕ್ಕಿಯನ್ನು ನುಣ್ಣಗೆ ರುಬ್ಬಿಕೊಳ್ಳಿ. ಇದನ್ನು ಮೊದಲೇ ರುಬ್ಬಿಟ್ಟ ಉದ್ದಿನ ಬೇಳೆಗೆ ಸೇರಿಸಿ.
ಸುಮಾರು 10-12 ಗಂಟೆಗಳ ಕಾಲ ಇದು ಫರ್ಮೆಂಟ್ ಆಗಲು ಬಿಡಿ. ಹಿಟ್ಟು ಚೆನ್ನಾಗಿ ಹುದುಗಿದ ಬಳಿಕ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕಲಸಿ. ಇದಕ್ಕೆ ಟೊಮೆಟೊ, ಈರುಳ್ಳಿ, ಹಸಿರು ಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಹೆಚ್ಚಿ ಸೇರಿಸಿ. ನಾನ್ ಸ್ಟಿಕ್ ಪ್ಯಾನ್ ಬಿಸಿಗಿಟ್ಟು ಸ್ವಲ್ಪ ಎಣ್ಣೆ ಹಚ್ಚಿ, ಅದು ಕಾದ ಬಳಿಕ ದೋಸೆ ಹಿಟ್ಟನ್ನು ವೃತ್ತಾಕಾರದಲ್ಲಿ ಹುಯ್ಯಿರಿ. ಮಧ್ಯಮ ಉರಿಯಲ್ಲಿ ಅವುಗಳನ್ನು ಬೇಯಿಸಿ. ಮುಚ್ಚಳ ಮುಚ್ಚಿ ಎರಡೂ ಕಡೆಗಳಿಂದ ಬೇಯಿಸಿದರೆ ರಾಗಿ ಉತ್ತಪ್ಪ ಸವಿಯಲು ಸಿದ್ಧ. ಅದನ್ನು ಕಾಯಿ ಚಟ್ನಿ ಜೊತೆ ಬಿಸಿ ಬಿಸಿಯಾಗಿ ಸವಿಯಿರಿ.