
ಸಾಮಾಜಿಕ ಜಾಲತಾಣ ಮೂಲಕ ಖ್ಯಾತಿ ಗಳಿಸಿರುವ ದೆಹಲಿಯ ವಡಾಪಾವ್ ಮಾರಾಟಗಾರ್ತಿ ಚಂದ್ರಿಕಾ ದೀಕ್ಷಿತ್ ಇತ್ತೀಚಿಗೆ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ್ದ ಸುದ್ದಿ ವೈರಲ್ ಆದ ಬೆನ್ನಲ್ಲೇ ಮತ್ತೊಂದು ವಿಚಾರಕ್ಕೆ ಮುನ್ನೆಲೆಗೆ ಬಂದಿದ್ದಾರೆ.
ಪೊಲೀಸರು ಆಕೆಯನ್ನು ಬಂಧಿಸಿದ್ದಾರೆಂಬ ನಕಲಿ ವಿಡಿಯೋ ವೈರಲ್ ಬೆನ್ನಲ್ಲೇ ಆಕೆ ಐಷಾರಾಮಿ ಕಾರು ಓಡಿಸುತ್ತಿರುವ ವಿಡಿಯೋ ಗಮನ ಸೆಳೆದಿದೆ. ಫೋರ್ಡ್ ಮಸ್ಟಾಂಗ್‌ನಲ್ಲಿ ಆಕೆ ಕುಳಿತಿರುವ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಕಾರ್ ನ ಸುತ್ತ ಹಲವಾರು ಮಂದಿ ನಿಂತಿದ್ದು ಕುತೂಹಲ ದಿಂದ ನೋಡುತ್ತಿರುತ್ತಾರೆ. ಕಾರ್ ನ ಹಿಂಬದಿ ಡಿಕ್ಕಿಯಲ್ಲಿದ್ದ ವಡಾಪಾವ್ ಗರ್ಲ್, ಒಂದಿಷ್ಟು ವಡಾಪಾವ್ ಗಳನ್ನು ಕೈಯಲ್ಲಿರಿಸಿಕೊಂಡು ಹೊರಗೆ ಬರುತ್ತಾಳೆ. ಐಷಾರಾಮಿ ಕಾರಿನಲ್ಲಿ ವಡಾಪಾವ್ ಮಾರಾಟವನ್ನು ಆರಂಭಿಸಿದ್ದೇನೆಂದು ತಿಳಿಸಲು ಚಂದ್ರಿಕಾ ದೀಕ್ಷಿತ್ ಈ ರೀತಿ ಮಾಡಿದ್ದರು ಎಂಬುದು ಗೊತ್ತಾಗಿದೆ. ಈ ವಿಡಿಯೋ ದಾಖಲೆ ಮಟ್ಟದಲ್ಲಿ ವೀಕ್ಷಣೆ ಗಳಿಸಿದೆ.
ಮೂಲಗಳ ಪ್ರಕಾರ ದುಬಾರಿ ಕಾರಿನ ಬೆಲೆ ರೂ. 93 ಲಕ್ಷ. ರಾಷ್ಟ್ರ ರಾಜಧಾನಿಯ ಬೀದಿಗಳಲ್ಲಿ ವಡಾ ಪಾವ್ ಮಾರಾಟ ಮಾಡುವ ಮೂಲಕ ಚಂದ್ರಿಕಾ ದೀಕ್ಷಿತ್ ಅದ್ಧೂರಿ ಜೀವನ ನಡೆಸುತ್ತಿರುವುದನ್ನು ನೋಡಿ ನೆಟ್ಟಿಗರು ಅಚ್ಚರಿ ಪಟ್ಟಿದ್ದಾರೆ. ಆಕೆಯ ಜೀವನಶೈಲಿಯನ್ನು ತಮ್ಮ ಜೀವನಶೈಲಿಯೊಂದಿಗೆ ಹೋಲಿಸಿಕೊಂಡು ವಡಾ ಪಾವ್ ವ್ಯವಹಾರದ ಕಲ್ಪನೆಯನ್ನು ರೋಮಾಂಚನಕಾರಿ ಮತ್ತು ಲಾಭದಾಯಕವೆಂದಿದ್ದಾರೆ. ಮತ್ತಷ್ಟು ಜನ ಓದುವುದು ಮತ್ತು ಕಚೇರಿ ಕೆಲಸವನ್ನು ಯಾಕೆ ಮಾಡಬೇಕು? ವಡಾಪಾವ್ ಮಾರಾಟ ಉತ್ತಮ ಆಯ್ಕೆ ಎಂದಿದ್ದಾರೆ.