ಜ಼ೊಮ್ಯಾಟೊ ಡೆಲಿವರಿ ಬಾಯ್ ಒಬ್ಬರು ಅಪಘಾತದಿಂದ ಸಾವನಪ್ಪಿದ್ದಾರೆ. ಮೃತರು ಓಡಿಸುತ್ತಿದ್ದ ಬೈಕನ್ನ ಕಾರೊಂದು ಹಿಂದಿನಿಂದ ಗುದ್ದಿದ್ದು, ಅಪಘಾತದಲ್ಲಿ ತೀವ್ರ ಗಾಯಗಳಾದ ಹಿನ್ನೆಲೆ ಅವರ ಸಾವಾಗಿದೆ.
ಅಷ್ಟಕ್ಕೂ ಇವರ ಬೈಕ್ ಗೆ ಗುದ್ದಿದ ಕಾರನ್ನು ಪೊಲೀಸ್ ಕಾನ್ಸ್ಟೇಬಲ್ ಒಬ್ಬರು ಓಡಿಸುತ್ತಿದ್ದರು, ಹಾಗೂ ಆ ಸಂದರ್ಭದಲ್ಲಿ ಆತ ಕಂಠಪೂರ್ತಿ ಕುಡಿದಿದ್ದರು ಎಂದು ವರದಿಯಾಗಿದೆ. ಈ ಘಟನೆಯು ದೆಹಲಿಯ, ರೋಹಿಣಿ ಪ್ರದೇಶದ ಬುದ್ಧ ವಿಹಾರ್ ನಲ್ಲಿ ಶನಿವಾರ ನಡೆದಿದೆ. ಅಪಘಾತಕ್ಕೆ ಕಾರಣನಾಗಿರುವ ಪೇದೆಯನ್ನ ಬಂಧಿಸಿದ್ದೇವೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಮೃತನನ್ನ ಸಲೀಲ್ ತ್ರಿಪಾಠಿ ಎಂದು ಗುರುತಿಸಲಾಗಿದ್ದು, ಆತ ಜ಼ೊಮ್ಯಾಟೋ ಕಂಪನಿಗೆ ಡೆಲಿವರಿ ಎಕ್ಸಿಕ್ಯೂಟಿವ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಇಡೀ ಕುಟುಂಬಕ್ಕೆ ಆಸರೆಯಾಗಿದ್ದ ಮೃತ ಸಲೀಲ್ ಒಬ್ಬರೇ ಇವರ ಕುಟುಂಬದ ದುಡಿಯುವ ಜೀವವಾಗಿದ್ದರು. ಸಲೀಲ್ ಅವರ ತಂದೆ ಸಹ ಎರಡನೇ ಅಲೆಯಲ್ಲಿ ಕೊರೋನಾ ಸೋಂಕಿಗೆ ಬಲಿಯಾಗಿದ್ದು, ಈಗ ಈ ಕುಟುಂಬ ಇಬ್ಬರು ದುಡಿಯುವ ಜೀವಗಳನ್ನ ಕಳೆದುಕೊಂಡಿದೆ.
ಜನವರಿ ಎಂಟರಂದು ರೋಹಿಣಿಯ ಬುದ್ಧ್ ವಿಹಾರ್ ನಲ್ಲಿ ಮಾರುತಿ ಬ್ರೀಜಾ ಕಾರ್, ಮೊದಲು ಡಿಟಿಸಿ ಬಸ್ ಗೆ ಗುದ್ದಿದೆ, ಆ ನಂತರ ಜ಼ೊಮ್ಯಾಟೋ ರೈಡರ್ ನನ್ನ ಗುದ್ದಿದೆ. ರೋಹಿಣಿಯ ಬಾಬಾ ಸಾಹೇಬ್ ಅಂಬೇಡ್ಕರ್ ಆಸ್ಪತ್ರೆ ಮುಂದೆಯೆ ಅಪಘಾತವಾಗಿದೆ. ಈ ಕಾರ್ ಅನ್ನು ರೋಹಿಣಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾನ್ಸ್ಟೇಬಲ್ ಮಹೇಂದ್ರ ಓಡಿಸುತ್ತಿದ್ದರು ಎಂದು ವರದಿಯಾಗಿದೆ.