ಯುವಕನನ್ನು ಕಳ್ಳ ಎಂದು ಶಂಕಿಸಿದ ಜನತೆ ಆತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ದಾರುಣ ಘಟನೆಯು ದೆಹಲಿಯಲ್ಲಿ ನಡೆದಿದೆ.
ಗಂಭೀರವಾಗಿ ಗಾಯಗೊಂಡಿದ್ದ ಯುವಕನನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಆತ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ.
ದೆಹಲಿಯ ಸುಲೇಮಾನ್ ನಗರದಲ್ಲಿ ಈ ಘಟನೆ ಸಂಭವಿಸಿದೆ. ಈ ಪ್ರದೇಶದ ಮನೆಯೊಂದಕ್ಕೆ ಯುವಕ ನುಗ್ಗಿದ್ದ ಎನ್ನಲಾಗಿದೆ. ಕೂಡಲೇ ಎಚ್ಚೆತ್ತುಕೊಂಡ ನಿವಾಸಿಗಳು ಆತನನ್ನು ಕಳ್ಳ ಎಂದು ಶಂಕಿಸಿದ್ದಾರೆ. ಯುವಕ ಮನೆಯ ಟೆರ್ರಾಸ್ನಿಂದ ಜಿಗಿದಿದ್ದ. ಆದರೆ ಹೇಗೋ ಯುವಕನನ್ನು ಹಿಡಿದ ನಿವಾಸಿಗಳು ಯುವಕನಿಗೆ ಧರ್ಮದೇಟು ನೀಡಿದ್ದಾರೆ.
ಪ್ರಕರಣ ಸಂಬಂಧ ಮಾತನಾಡಿದ ಡಿಸಿಪಿ ಪರಮಿಂದರ್ ಸಿಂಗ್, ಏನೋ ಶಬ್ದ ಕೇಳಿ ಬಂದ ಹಿನ್ನೆಲೆಯಲ್ಲಿ ಮನೆಯವರು ಎಚ್ಚೆತ್ತಿದ್ದಾರೆ. ಇದೇ ವೇಳೆ ಈ ಯುವಕ ಜನರ ಕೈಯಿಂದ ಪಾರಾಗುವ ಸಲುವಾಗಿ ಮನೆಯ ಟೆರ್ರಾಸ್ನಿಂದ ಜಿಗಿದಿದ್ದಾನೆ. ಆದರೆ ಸಾರ್ವಜನಿಕರು ಈತನನ್ನು ಹಿಡಿದು ಥಳಿಸಿದ್ದಾರೆ. ಗಾಯಗೊಂಡಿದ್ದ ಯುವಕನನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಆತ ಬದುಕುಳಿಯಲಿಲ್ಲ ಎಂದು ಹೇಳಿದ್ದಾರೆ.