ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಿಂದ ವರದಿಯಾದ ಆಘಾತಕಾರಿ ಘಟನೆಯೊಂದರಲ್ಲಿ 22 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ.
ಶಕೂರ್ ಬಸ್ತಿ ರೈಲ್ವೆ ಪ್ಲಾಟ್ ಫಾರಂನಿಂದ ಯುವತಿಯನ್ನು ಎಳೆದೊಯ್ದ ಮೂವರು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಗುರುವಾರ ರಾತ್ರಿ ಘಟನೆ ನಡೆದಿದ್ದು, ಶಂಕಿತರ ಬಂಧನಕ್ಕೆ ಪೊಲೀಸ್ ತಂಡಗಳನ್ನು ರಚಿಸಲಾಗಿದೆ.
ಶಕೂರ್ ಬಸ್ತಿ ನಿಲ್ದಾಣ ಸಮೀಪದಲ್ಲೇ ವಾಸವಾಗಿರುವ ಯುವತಿಯ ಕುಟುಂಬ ಸದಸ್ಯರೊಂದಿಗೆ ಜಗಳವಾಡಿ ರೈಲು ನಿಲ್ದಾಣಕ್ಕೆ ಬಂದು ಕುಳಿತಿದ್ದಾಳೆ. ಪ್ಲಾಟ್ ಫಾರಂಗೆ ಬಂದ ಮೂವರು ಅನುಚಿತವಾಗಿ ಸ್ಪರ್ಶಿಸಿದ್ದಾರೆ. ವಿರೋಧ ವ್ಯಕ್ತಪಡಿಸಿದಾಗ ರೈಲ್ವೆ ನಿಲ್ದಾಣ ಸಮೀಪದ ಪೊದೆಗೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.
ಘಟನೆಯ ಬಳಿಕ ಮನೆಗೆ ಆಗಮಿಸಿದ ಯುವತಿ, ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದು, ನಂತರ ಪೊಲೀಸರಿಗೆ ವಿಷಯ ತಿಳಿಸಿ ದೂರು ನೀಡಲಾಗಿದೆ. ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ವೈದ್ಯಕೀಯ ಪರೀಕ್ಷೆಯಲ್ಲಿ ಲೈಂಗಿಕ ದೌರ್ಜನ್ಯ ದೃಢಪಟ್ಟ ನಂತರ ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಿಸಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಗುರುತಿಸಿ ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ.