ಜೋರಾಗಿ ಡಿಜೆ ಸಂಗೀತ ಹಾಕಿದ್ದರ ಬಗ್ಗೆ ಪ್ರಶ್ನಿಸಿದ ಮಹಿಳೆಯ ಮೇಲೆ ಪಕ್ಕದ ಮನೆಯವರು ಗುಂಡು ಹಾರಿಸಿರುವ ಘಟನೆ ವಾಯವ್ಯ ದೆಹಲಿಯ ಸಿರಸ್ಪುರದಲ್ಲಿ ನಡೆದಿದೆ.
ಪಕ್ಕದ ಮನೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಜೋರಾಗಿ ಡಿಜೆ ಸಂಗೀತ ನುಡಿಸುವುದನ್ನು ವಿರೋಧಿಸಿದ ಮಹಿಳೆಯೊಬ್ಬಳ ಮೇಲೆ ಆಕೆಯ ನೆರೆಹೊರೆಯವರು ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆಯ ಮೇಲೆ ಗುಂಡು ಹಾರಿಸಿದ ಹರೀಶ್ ಮತ್ತು ಆತನ ಸ್ನೇಹಿತ ಅಮಿತ್ ಎಂಬಾತನನ್ನು ಬಂಧಿಸಲಾಗಿದೆ .
ಸೋಮವಾರ ಮಧ್ಯರಾತ್ರಿ 12:15 ರ ಸುಮಾರಿಗೆ, ಸಿರಾಸ್ಪುರದಲ್ಲಿ ಗುಂಡಿನ ದಾಳಿಯ ಘಟನೆಗೆ ಸಂಬಂಧಿಸಿದಂತೆ ಕರೆ ಸ್ವೀಕರಿಸಿದ ನಂತರ ಪೊಲೀಸರು ಸ್ಥಳಕ್ಕಾಗಮಿಸಿದರು.
ಸ್ಥಳಕ್ಕಾಗಮಿಸಿದ ನಂತರ ಸಿರಸ್ಪುರದ ನಿವಾಸಿ ರಂಜು ಎಂಬ ಮಹಿಳೆಯನ್ನು ಶಾಲಿಮಾರ್ ಬಾಗ್ನಲ್ಲಿರುವ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆಯ ಕುತ್ತಿಗೆಗೆ ಗುಂಡೇಟಿನಿಂದ ಗಾಯವಾಗಿದೆ ಮತ್ತು ಹೇಳಿಕೆ ಪಡೆಯಲು ಸಾಧ್ಯವಿಲ್ಲ ಎಂದು ಆಸ್ಪತ್ರೆಯ ವೈದ್ಯರು ಪೊಲೀಸರಿಗೆ ತಿಳಿಸಿದ್ದರು. ಹೀಗಾಗಿ ನಂತರ ಪ್ರತ್ಯಕ್ಷದರ್ಶಿಯಾದ ಸಂತ್ರಸ್ತೆಯ ಸೊಸೆಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ.
ಪ್ರತ್ಯಕ್ಷದರ್ಶಿ ಹೇಳಿಕೆ ಪ್ರಕಾರ, ಭಾನುವಾರ ಹರೀಶ್ ಎಂಬುವವರ ಮನೆಯಲ್ಲಿ ಕಾರ್ಯಕ್ರಮದ ವೇಳೆ ಡಿಜೆ ಒಬ್ಬರು ಜೋರಾಗಿ ಸಂಗೀತ ನುಡಿಸುತ್ತಿದ್ದರು. ರಂಜು ತನ್ನ ಬಾಲ್ಕನಿಯಲ್ಲಿ ಹೊರಬಂದು ಸಂಗೀತವನ್ನು ನಿಲ್ಲಿಸುವಂತೆ ಹರೀಶ್ನನ್ನು ಕೇಳಿದ್ದರು. ಬಳಿಕ ಹರೀಶ್ ತನ್ನ ಸ್ನೇಹಿತ ಅಮಿತ್ನಿಂದ ಬಂದೂಕು ತೆಗೆದುಕೊಂಡು ಗುಂಡು ಹಾರಿಸಿದ್ದಾನೆ. ರಂಜುಗೆ ಗುಂಡು ತಗುಲಿದೆ ಎಂದು ಪ್ರತ್ಯಕ್ಷದರ್ಶಿ ಪೊಲೀಸರಿಗೆ ತಿಳಿಸಿದ್ದಾರೆ.
ಹರೀಶ್ ಮತ್ತು ಅಮಿತ್ ಎಂಬುವರನ್ನು ಬಂಧಿಸಲಾಗಿದೆ. ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 307 (ಕೊಲೆ ಯತ್ನ) ಮತ್ತು 34 (ಸಾಮಾನ್ಯ ಉದ್ದೇಶ) ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 27 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.