ಪತಂಜಲಿ ಯೋಗಪೀಠದ ಹೆಸರಿನಲ್ಲಿ ನಕಲಿ ಜಾಲತಾಣ ಸೃಷ್ಟಿಸಿ ಜನರನ್ನು ವಂಚಿಸುತ್ತಿದ್ದ 38-ವರ್ಷ ವಯಸ್ಸಿನ ಡಿಸೈನರ್ ಒಬ್ಬನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಆಪಾದಿತನನ್ನು ದೆಹಲಿಯ ಲಕ್ಷ್ಮೀ ನಗರದ ನಿವಾಸಿ ರಾಹುಲ್ ಕುಮಾರ್ ಎಂದು ಗುರುತಿಸಲಾಗಿದೆ. ತಮ್ಮ ಮಡದಿಯ ಚಿಕಿತ್ಸೆಗೆ ಹುಡುಕಾಟದಲ್ಲಿ ಅಂತರ್ಜಾಲದ ಶೋಧದಲ್ಲಿ ತೊಡಗಿದ ವೇಳೆ ತಮಗೆ ಈ ಸಂಖ್ಯೆ ಸಿಕ್ಕಿದೆ ಎಂದು ಸಂತ್ರಸ್ತರೊಬ್ಬರು ದ್ವಾರಕಾ ಸೈಬರ್ ಪೊಲೀಸ್ ಠಾಣೆಯಲ್ಲಿ ಕೊಟ್ಟ ದೂರಿನ ಅನ್ವಯ ಆಪಾದಿತನನ್ನು ಬಂಧಿಸಲಾಗಿದೆ.
ಇದಾದ ಬಳಿಕ, ಈ ಮೊಬೈಲ್ ನಂಬರ್‌ಗೆ ಕರೆ ಮಾಡಿ ಆತನನ್ನು ಸಂಪರ್ಕಿಸಿದಾಗ, ಡಾ. ಸಚಿನ್ ಅಗರ್ವಾಲ್ ಎಂಬಾತ ಬ್ಯಾಂಕ್ ಖಾತೆಯೊಂದರಲ್ಲಿ 50,000ರೂಗಳನ್ನು ಜಮಾ ಮಾಡುವಂತೆ ಕೋರಿದ್ದಾನೆ. ಆದರೆ ಇದಾದ ಬಳಿಕ ಇದೇ ಸಂಖ್ಯೆಗೆ ಸಂಪರ್ಕಿಸಲು ದೂರುದಾರರಿಗೆ ಸಾಧ್ಯವಾಗಲಿಲ್ಲ.
“ಮತ್ತೊಮ್ಮೆ ಗೂಗಲ್‌ನಲ್ಲಿ ಶೋಧ ಮಾಡಿದ ದೂರುದಾರನಿಗೆ ಮತ್ತೊಂದು ಮೊಬೈಲ್ ಸಂಖ್ಯೆ ಸಿಕ್ಕಿದ್ದು, ಆ ಸಂಖ್ಯೆಗೆ ಕರೆ ಮಾಡಿದಾಗ ಮತ್ತೊಂದು ಬ್ಯಾಂಕ್ ಖಾತೆಯಲ್ಲಿ 45,600 ರೂಗಳನ್ನು ಜಮಾ ಮಾಡುವಂತೆ ಒತ್ತಾಯಿಸಲಾಗಿದೆ. ಮತ್ತೊಮ್ಮೆ ಇದೇ ವ್ಯಕ್ತಿಯನ್ನು ಸಂಪರ್ಕಿಸಿದ ವೇಳೆ ಆತ ದೂರುದಾರರಿಂದ 56,800 ರೂ.ಗಳನ್ನು ಕೇಳಿದ್ದಾನೆ. ಆದರೆ ಈ ಬಾರಿ ದೂರುದಾರರು ಪಾವತಿ ಮಾಡಿಲ್ಲ,” ಎಂದು ಪೊಲೀಸ್ ಉಪ ಕಮಿಷನರ್ (ದ್ವಾರಕಾ) ಎಂ ಹರ್ಷವರ್ಧನ್ ತಿಳಿಸಿದ್ದಾರೆ.
ತನಿಖೆ ವೇಳೆ, ಫಲಾನುಭವಿಯ ಬ್ಯಾಂಕ್ ಖಾತೆಯ ವಿವರಗಳನ್ನು ಪಡೆಯಲಾಗಿದ್ದು, ದೂರು ನೀಡಲಾದ ಸಂಖ್ಯೆಗೆ ಮಾಡಲಾದ ಕರೆ ವಿವರಗಳನ್ನು ವಿಶ್ಲೇಷಿಸಲಾಗಿದೆ.
“ಮಾರ್ಚ್ 21ರಂದು, ತಾಂತ್ರಿಕ ವಿಶ್ಲೇಷಣೆ ಹಾಗೂ ಸರ್ವೇಕ್ಷಣೆಯ ನೆರವಿನಿಂದ ಸೈಬರ್ ಪೊಲೀಸರ ತಂಡವು ರಾಹುಲ್‌ನ ಮನೆ ಮೇಲೆ ರೇಡ್ ಮಾಡಿದ್ದು, ಆತನನ್ನು ಲಕ್ಷ್ಮೀನಗರ ಪ್ರದೇಶದಲ್ಲಿ ಬಂಧಿಸಲಾಗಿದೆ.
“ತನಿಖೆ ವೇಳೆ, ತಾನು ನಕಲಿ ಜಾಲತಾಣಗಳ ವಿನ್ಯಾಸ ಮಾಡುತ್ತಿದ್ದಿದ್ದಾಗಿ ರಾಹುಲ್ ಒಪ್ಪಿಕೊಂಡಿದ್ದಾನೆ. ತನ್ನೊಂದಿಗೆ ಸುಮೀತ್ ಎಂಬಾತ ಸಹ ಸಕಲಿ ಸೇವೆಗಳನ ಹೆಸರಿನಲ್ಲಿ ಜನರನ್ನು ವಂಚಿಸುತ್ತಿದ್ದ ಎಂದು ಬಾಯಿಬಿಟ್ಟಿದ್ದಾನೆ. ಪತಂಜಲಿ ಸೇರಿದಂತೆ ಅನೇಕ ಮೂಂಚೂಣಿ ಕಂಪನಿಗಳ ನಕಲಿ ಜಾಲತಾಣಗಳನ್ನು ಸೃಷ್ಟಿಸಿ, ಬಿಹಾರದ ರಾಜ್‌ಗಿರ್‌ನ ನಿವಾಸಿ ಸುಮೀತ್ ಎಂಬಾತ ಕೊಡುವ ದೂರವಾಣಿ ಸಂಖ್ಯೆಗಳನ್ನು ಅಲ್ಲಿ ನಮೂದಿಸಿ, ಜನರಿಗೆ ವಂಚನೆಯ ಜಾಲ ಬೀಸುತ್ತಿದ್ದ,” ಎಂದು ಡಿಸಿಪಿ ತಿಳಿಸಿದ್ದಾರೆ.
“ಸಂತ್ರಸ್ತರಿಗೆ ಬೇರೆ ಬೇರೆ ಬ್ಯಾಂಕ್ ಖಾತೆಗಳಲ್ಲಿ ಹಣ ಠೇವಣಿ ಇಡುವಂತೆ ಸುಮೀತ್ ತಿಳಿಸುತ್ತಿದ್ದ. ಬಳಿಕ ವಂಚನೆ ಮಾಡಿ ಪಡೆದ ಹಣವನ್ನು ಇಬ್ಬರೂ ತಮ್ಮಲ್ಲಿ ಹಂಚಿಕೊಳ್ಳುತ್ತಿದ್ದರು. ಹರಿದ್ವಾರದಲ್ಲಿರುವ ಪತಂಜಲಿ ಯೋಗಪೀಠದ ಹೆಸರಿನಲ್ಲಿ ಇಬ್ಬರೂ ಹೀಗೆ ವಂಚಿಸುತ್ತಿದ್ದರು,” ಎಂದು ಡಿಸಿಪಿ ತಿಳಿಸಿದ್ದಾರೆ.