ಬೈಕ್ ಸವಾರನಿಗೆ ಸಹಾಯ ಮಾಡುವ ನೆಪದಲ್ಲಿ ಪಿಕ್ ಪಾಕೆಟ್ ಮಾಡಿದ ಕಳ್ಳನನ್ನು ದೆಹಲಿ ಪೊಲೀಸರು ತ್ವರಿತಗತಿಯಲ್ಲಿ ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಕಳ್ಳನೊಬ್ಬ ಬೈಕ್ ಚಲಾಯಿಸಲು ಸಹಾಯ ಮಾಡುವ ನೆಪದಲ್ಲಿ ಸವಾರನೊಂದಿಗೆ ಮಾತನಾಡುತ್ತಿರುತ್ತಾನೆ.
ಈ ವೇಳೆ ಬೈಕ್ ಸವಾರನಿಗೆ ಗೊತ್ತಾಗದಂತೆ ಆತನ ಜೇಬಿನಿಂದ ಪರ್ಸ್ ತೆಗೆದುಕೊಳ್ಳುತ್ತಾನೆ. ತತ್ ಕ್ಷಣ ಸದರ್ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ಸಚಿನ್ ಓಡಿ ಬಂದು ಜತಿನ್ ಎಂದು ಗುರುತಿಸಲಾದ ಕಳ್ಳನನ್ನು ಹಿಡಿಯುತ್ತಾರೆ.
ಘಟನೆ ನಡೆದ ನಿಖರವಾದ ದಿನಾಂಕ ಮತ್ತು ಸಮಯ ಇನ್ನೂ ಖಚಿತವಾಗಿಲ್ಲ. ಆದರೆ ಕಾನ್ಸ್ ಟೇಬಲ್ ನ ತ್ವರಿತ ಕಾರ್ಯಾಚರಣೆಯನ್ನು ಮೆಚ್ಚಿ ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.
ಈ ವಿಡಿಯೋಗೆ ಪ್ರತಿಕ್ರಿಯಿಸಿದ ದೆಹಲಿ ಪೊಲೀಸರು “ಸದರ್ ಬಜಾರ್ ಪೊಲೀಸ್ ಸ್ಟೇಷನ್ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದಾಗ, ಕಾನ್‌ಸ್ಟೇಬಲ್ ಸಚಿನ್ ಕಳ್ಳತನದ ಅಪರಾಧವನ್ನು ಶಂಕಿಸಿ ಓಡಿ ಬಂದು ವ್ಯಕ್ತಿಯನ್ನು ಹಿಡಿದು ಬಂಧಿಸಿದ್ದಾರೆ” ಎಂದು ಹೇಳಿದ್ದಾರೆ.