ಸಾಮಾಜಿಕ ಜಾಲತಾಣಗಳು ಸಾಮಾನ್ಯರನ್ನೂ ಕೂಡ ಏಕಾಏಕಿ ಸೆಲೆಬ್ರೆಟಿ ಮಾಡಬಹುದು. ಹಾಗೆಯೇ ರಾತ್ರೋರಾತ್ರಿ ಫೇಮಸ್ ಆದ ಸಾಮಾನ್ಯನನ್ನು ಕ್ಷಣಾರ್ಧದಲ್ಲೇ ಕೆಳಗೆ ತಳ್ಳಬಹುದು. ಇದಕ್ಕೆ ಈಗಾಗಲೇ ಹಲವು ಉದಾಹರಣೆಗಳಿದ್ದು, ಇದೀಗ ಮತ್ತೊಂದು ಸೇರ್ಪಡೆಯಾಗಿದೆ.
ನವದೆಹಲಿಯ ಪಿತಾಂಪುರ ಪ್ರದೇಶದಲ್ಲಿ ‘ಮುಂಬೈ ಕಾ ಫೇಮಸ್ ವಡಾಪಾವ್’ ಎಂಬ ಅಂಗಡಿಯನ್ನು ಚಂದ್ರಿಕಾ ದೀಕ್ಷಿತ್ ಎಂಬ ಯುವತಿ ನಡೆಸುತ್ತಿದ್ದು, ಕೆಲ ತಿಂಗಳ ಹಿಂದೆ ಅಧಿಕಾರಿಗಳು ಇದನ್ನು ತೆರವುಗೊಳಿಸಲು ಬಂದ ವೇಳೆ ಮನಕಲಕುವಂತೆ ಕಣ್ಣೀರಿಟ್ಟಿದ್ದು ಇದು ವೈರಲ್ ಆಗಿತ್ತು.
ಬಳಿಕ ಚಂದ್ರಿಕಾ ರಾತ್ರೋರಾತ್ರಿ ಫೇಮಸ್ ಆಗಿದ್ದು ಆಕೆಯ ಬೆಂಬಲಕ್ಕೆ ಬಹುತೇಕ ನೆಟ್ಟಿಗರು ನಿಂತಿದ್ದರು. ಅಲ್ಲದೆ ವಡಾಪಾವ್ ಅಂಗಡಿಯೂ ಸಹ ಫೇಮಸ್ ಆಗಿತ್ತು. ಇದೀಗ ಚಂದ್ರಿಕಾ ಮಾಡಿದ ಯಡವಟ್ ಒಂದರ ಕಾರಣಕ್ಕೆ ಮತ್ತೆ ಸುದ್ದಿಯಲ್ಲಿದ್ದಾರೆ. ಅಲ್ಲದೆ ನೆಟ್ಟಿಗರು ಕೂಡಾ ಟೀಕೆ ಮಾಡುತ್ತಿದ್ದಾರೆ.
ಅಷ್ಟಕ್ಕೂ ಆಗಿದ್ದೇನೆಂದರೆ ಚಂದ್ರಿಕಾಗೆ ಇತ್ತೀಚೆಗೆ ಶಸ್ತ್ರ ಚಿಕಿತ್ಸೆ ನಡೆದಿದ್ದು, ಬಾಯೊಳಗೆ ಹೊಲಿಗೆ ಹಾಕಲಾಗಿತ್ತು. ವಡಾಪಾವ್ ತಯಾರಿ ವೇಳೆ ಆಕೆ ತನ್ನ ಕೈನಿಂದ ಬಾಯಿ ತೆರೆದು ತೋರಿಸಿ ಬಳಿಕ ವಡಾಪಾವ್ ಮುಟ್ಟಿದ್ದಾಳೆ. ಇದು ನೆಟ್ಟಿಗರ ಕಣ್ಣು ಕೆಂಪಗಾಗಿಸಿದ್ದು, ಬಾಯೊಳಗೆ ಕೈ ಹಾಕಿದ ಬಳಿಕ ಶುಚಿತ್ವ ಇಲ್ಲದೆ ಮತ್ತೆ ವಡಾಪಾವ್ ಮುಟ್ಟಿದ್ದಕ್ಕೆ ಟೀಕೆ ಮಾಡುತ್ತಿದ್ದಾರೆ.
ಕೆಲ ನೆಟ್ಟಿಗರಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಈ ವಿಡಿಯೋವನ್ನು ದೆಹಲಿ ಮಹಾನಗರ ಪಾಲಿಕೆ ಆರೋಗ್ಯ ಅಧಿಕಾರಿಗಳಿಗೆ ಟ್ಯಾಗ್ ಮಾಡಿ, ಶುಚಿತ್ವ ಇಲ್ಲದೆ ವಡಾ ಪಾವ್ ತಯಾರಿಸಿರುವ ಚಂದ್ರಿಕಾ ವಿರುದ್ಧ ಕ್ರಮಕ್ಕೆ ಒತ್ತಾಯಿಸುತ್ತಿದ್ದಾರೆ.